ಬಸವ ತತ್ವ ಹಿಡಿದು ಕಾಯಕ ಮಾಡಲು ಬಿ.ಡಿ.ಜತ್ತಿ ಸ್ಪೂರ್ತಿ

IMG-20230911-WA0048
Published on

ಅನುಭವ ಮಂಟಪದಲ್ಲಿ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಸಂದರ್ಭದಲ್ಲಿ ಅರವಿಂದ ಜತ್ತಿ ಭಾವುಕ ನುಡಿ

ಕಲಬುರಗಿ: ಬಿ.ಡಿ. ಜತ್ತಿ ಅವರ ಪ್ರಭಾವಳಿ ನನ್ನಲ್ಲೂ ಕೆಲಸ ಮಾಡುತ್ತಿದ್ದರಿಂದ ಬಸವತತ್ವ ಹಿಡಿದು ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಬಸವ ಸಮಿತಿಯ ಕೇಂದ್ರ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿ, ಡಾ.ಬಿ.ಡಿ.‌ಜತ್ತಿ
ಸೋಮವಾರ ಸಂಜೆ ಆಯೋಜಿಸಿದ್ದ ಬಸವ ಸಂಸ್ಥಾಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಅನುಭಾವ ನೀಡಿದ ಅವರು, ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ ಎಂಬರ್ಥದಲ್ಲಿ ಬಿ.ಡಿ. ಜತ್ತಿ ಬದುಕಿದ್ದರು ಎಂದು ಅವರ ಬದುಕಿನ ಅನೇಕ ಘಟನಾವಳಿಗಳನ್ನು ವಿವರಿಸಿದರು.

ತನುವಿನಲ್ಲಿ ನಿರ್ಮೋಹ ಹೊಂದಿದ್ದ ಜತ್ತಿ ಅವರಿಗೆ ಭಾರತದ ಉಪ ರಾಷ್ಟ್ರಪತಿ, ಮುಖ್ಯಮಂತ್ರಿ ಆಗಿದ್ದರೂ ಮನದಲ್ಲಿ ಎಂದಿಗೂ ಅಹಂಕಾರ ಸುಳಿಯಲಿಲ್ಲ. ಸರಳ, ಸಾದಾ ಜೀವನ ನಡೆಸಿದರು ಎಂದು ತಿಳಿಸಿದರು.

ಅಂತರಂಗ- ಬಹಿರಂಗ ಶುದ್ಧವಾಗಿಟ್ಟುಕೊಂಡಿದ್ದ ಬಸಪ್ಪ ದಾನಪ್ಪ ಜತ್ತಿ ಅವರು, ಸಮಾಜದ ಶುದ್ಧೀಕರಣಕ್ಕಾಗಿ ಬಸವತತ್ವ ಪ್ರಚಾರ ಮತ್ತು ಪ್ರಸಾರಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು ಎಂದು ಹೇಳಿದರು.

ಬಸವಣ್ಣ ಕೇವಲ ಪ್ರಜಾಪ್ರಭುತ್ವ ಸ್ಥಾಪಿಸಲಿಲ್ಲ. ಪ್ರಜ್ಞಾ ಪ್ರಭುತ್ವ ಕೂಡ ಸ್ಥಾಪಿಸಿದ್ದರು ಎಂದು ಅಭಿಪ್ರಾಯಪಟ್ಟರು.

111ನೇ ಜಯಂತ್ಯುತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಜಿ-20 ಶೃಂಗ ಸಭೆಯಲ್ಲಿ ಕೂಡ ಬಸವ ಸಮಿತಿಯ ಉಲ್ಲೇಖ ಮಾಡಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಮಾತನಾಡಿ, ಹಳ್ಳಿಯಿಂದ ದಿಲ್ಲಿಯವರೆಗೆ ಬೆಳೆದು ನಿಂತ ಬಿ.ಡಿ. ಜತ್ತಿ ಅವರು ಬಸವಾದಿ ಶರಣರ ಬದುಕು ಹಾಗೂ ಬೋಧನೆಗಳನ್ನು ಸಮಾಜದ ಮುಂದಿಟ್ಟ ಮಹಾ ಮಹಿಮರಾಗಿದ್ದಾರೆ ಎಂದು ತಿಳಿಸಿದರು.

ಸಮಾಜದಲ್ಲಿನ ಮೂಢನಂಬಿಕೆ, ಲೋಪ ದೋಷಗಳನ್ನು ವಚನಕಾರರಂತೆ ಜತ್ತಿ ಅವರು ಕೂಡ ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ವ್ಯಕ್ತಿಯಾಗಿದ್ದರು. ಶರಣರ ಬದುಕಿನ ಮಾರ್ಗವೇ ಜತ್ತಿಯವರ ಜೀವನ ಮಾರ್ಗವಾಗಿತ್ತು ಎಂದು ಹೇಳಿದರು.

ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ವೇದಿಕೆಯಲ್ಲಿದ್ದರು. ಡಾ. ಆನಂದ ಸಿದ್ದಾಮಣಿ ನಿರೂಪಿಸಿದರು. ಡಾ. ಜಯಶ್ರೀ ದಂಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಕೆ.ಎಸ್. ವಾಲಿ ವಂದಿಸಿದರು.

ಬಂಡಪ್ಪ ಕೇಸೂರ, ಡಾ. ವೀರಣ್ಣ ದಂಡೆ, ಎ.ಎಸ್. ಪಾಟೀಲ, ಪ್ರಭುಲಿಂಗ ಮಹಾಗಾಂವಕರ, ಜಗನ್ನಾಥ ಮೀಸೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net