ಪ್ರತಿದಿನ 14 ಗಂಟೆ ದುಡಿಮೆ, ಓವರ್‌ಟೈಮ್ ಕೆಲ್ಸಕ್ಕೆ ವೇತನವೂ ಇಲ್ಲ! ಯುವಕನ ನಿರ್ಧಾರಕ್ಕೆ ಭಾರಿ ಮೆಚ್ಚುಗೆ | Work-Life

Work-Life
Published on

Work-Life: ಕೆಲಸ ಮಾಡುವ ಸ್ಥಳವನ್ನು ಎರಡನೇ ಮನೆ ಅಂತ ಪರಿಗಣಿಸಬೇಕೆಂದು ಅನೇಕರು ಹೇಳುತ್ತಾರೆ. ಏಕೆಂದರೆ, ತನ್ನ ಸ್ವಂತ ಮನೆಯನ್ನು ಬಿಟ್ಟರೆ, ಒಬ್ಬ ವ್ಯಕ್ತಿ ಪ್ರತಿದಿನ ಹೆಚ್ಚಿನ ಸಮಯವನ್ನು ಕೆಲಸದಲ್ಲಿ ಕಳೆಯುತ್ತಾನೆ. ಹೀಗಾಗಿ ಕೆಲಸ ಮಾಡುವ ಸ್ಥಳವನ್ನು ಎರಡನೇ ಮನೆ ಎಂದು ಪರಿಗಣಿಸಿದರೆ, ಕೆಲಸದ ವಾತಾವರಣ ಕೂಡ ಉತ್ತಮವಾಗಿರುತ್ತದೆ. ಇದು ಮಾನಸಿಕವಾಗಿ ನಮ್ಮ ಮೇಲೆ ಪರಿಣಾಮ ಕೂಡ ಬೀರುತ್ತದೆ. ಇತ್ತೀಚೆಗಷ್ಟೇ ಯುವಕನೊಬ್ಬ ತನ್ನ ಕೆಲಸದ ಅನುಭವದ ಕುರಿತು ಹಂಚಿಕೊಂಡ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೆಚ್ಚು ಹೊತ್ತು ಕೆಲಸ ಮಾಡಬೇಕಾದ ಪರಿಸ್ಥಿತಿ. ಅದೂ ಒಂದೆರೆಡು ಗಂಟೆಯಲ್ಲ ಅಥವಾ ಎಂಟು ಗಂಟೆಯೂ ಅಲ್ಲ, ಬದಲಾಗಿ 14 ಗಂಟೆ ಕೆಲಸ. ಇದರಿಂದ ಬೇಸತ್ತು ತಮ್ಮ ಪ್ರಾಜೆಕ್ಟ್ ಮ್ಯಾನೇಜರ್ ಜತೆ ಕೆಲಸ ಹಾಗೂ ಜೀವನವನ್ನು ಹೇಗೆ ಬ್ಯಾಲೆನ್ಸ್​ ಮಾಡಬೇಕೆಂದು ಕೇಳಿದಾಗ ಮ್ಯಾನೇಜರ್​ ವ್ಯಂಗ್ಯವಾಡಿದರು ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ. ಶ್ರೇಯಸ್ ಎಂಬ ಯುವಕ ರೆಡ್ಡಿಟ್​ನಲ್ಲಿ ತಮಗಾದ ಸಂಕಷ್ಟದ ಬಗ್ಗೆ ಬರೆದುಕೊಂಡಿದ್ದಾನೆ. ವರ್ಕ್ ಲೈಫ್ ಬ್ಯಾಲೆನ್ಸ್ ಎಂಬುದು ಭಾರತದಲ್ಲಿ ಚಾಲ್ತಿಯಲ್ಲಿಲ್ಲ, ಇದು ಪಾಶ್ಚಿಮಾತ್ಯ ಕಲ್ಪನೆ ಎಂದು ಮ್ಯಾನೇಜರ್, ಶ್ರೇಯಸ್ ಅವರನ್ನು ಲೇವಡಿ ಮಾಡಿದರಂತೆ.

ಓದಲು ಮತ್ತು ವ್ಯಾಯಾಮ ಮಾಡಲು ಸಮಯವ ಕಳೆಯುವ ತಮ್ಮ ಬಯಕೆಯನ್ನು ಹೇಳಿಕೊಂಡಿದ್ದಕ್ಕೆ ಮ್ಯಾನೇಜರ್​ ಗೇಲಿ ಮಾಡಿದರು. ನಮ್ಮ ಕಂಪನಿಯು ನೌಕರರು 12 ರಿಂದ 14 ಗಂಟೆಗಳವರೆಗೆ ಕೆಲಸ ಮಾಡುವುದನ್ನು ನಿರೀಕ್ಷಿಸುತ್ತದೆ. ಅಧಿಕಾವಧಿ ಕೆಲಸ ಮಾಡುವುದು ಇಲ್ಲಿ ಸಮಸ್ಯೆಯಲ್ಲ, ನಮ್ಮ ಸಮಸ್ಯೆನ್ನು ಹೇಳಿಕೊಂಡಾಗ ಅಪಹಾಸ್ಯ ಮಾಡಿ, ಟೀಕಿಸಿದ್ದು, ಬಹಳ ಚಿಂತೆಗೀಡುಮಾಡಿತು. ಕಚೇರಿಯ ವಾತಾವರಣ ಬಹಳ ಶೋಷಣೆಯಿಂದ ಕೂಡಿದೆ. ಇನ್ನೊಂದು ವಿಷಯವೇನೆಂದರೆ, ಓವರ್‌ಟೈಮ್ ಕೆಲಸಕ್ಕಾಗಿ ಒಂದು ರೂಪಾಯಿಯನ್ನು ಹೆಚ್ಚು ಪಾವತಿಸಲು ಕಂಪನಿಯು ಸಿದ್ಧವಿಲ್ಲ ಎಂದು ಶ್ರೇಯಸ್ ಹೇಳಿದ್ದಾರೆ.

ಇನ್ನು ಯುವಕನ ಪೋಸ್ಟ್​ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೇಶದ ನವ ಯುವಕರು ಕಾರ್ಮಿಕ ಶೋಷಣೆಯ ವಿರುದ್ಧ ಪ್ರತಿಕ್ರಿಯಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಜಗತ್ತಿನ ಅನೇಕ ಕಂಪನಿಗಳು ಕಾರ್ಮಿಕರ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವಾಗ ಇಂತಹ ಘಟನೆಗಳು ನಡೆಯುತ್ತಿರುವುದು ಆಘಾತಕಾರಿ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಕಂಪನಿಯ ವಿಚಿತ್ರ ನಿಯಮಗಳನ್ನು ಒಪ್ಪಿಕೊಳ್ಳದೆ ಶ್ರೇಯಸ್ ಮೊದಲ ದಿನವೇ ಕೆಲಸವನ್ನು ತೊರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net