

| ರಮೇಶ ದೊಡ್ಡಪುರ ಬೆಂಗಳೂರು
ನಗರೀಕರಣ ಹಾಗೂ ಕೈಗಾರಿಕೀಕರಣದಿಂದ ದೇಶದ ಬಹುದೊಡ್ಡ ಸಂಖ್ಯೆಯ ಯುವಕರು ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಕರೊನಾ ಸಂಕಷ್ಟದ ಕಾಲಘಟ್ಟದಲ್ಲಿ ದೊರಕಿರುವ ಚಿನ್ನದ ಅವಕಾಶವನ್ನು ಸರ್ಕಾರಗಳು ಕೈಚೆಲ್ಲಿವೆ. ಕರೊನಾ ಕಾರಣ ಹಾಗೂ ವರ್ಕ್ ಫ್ರಂ ಹೋಮ್ ವ್ಯವಸ್ಥೆಯೇ ಶಾಶ್ವತ ವಾಗುತ್ತಿರುವ ಸನ್ನಿವೇಶದಲ್ಲಿ, ಹಳ್ಳಿಗಳಲ್ಲಿ ಅಪ್ಪ- ಅಮ್ಮನ ಜತೆಗಿದ್ದುಕೊಂಡೇ ವೃತ್ತಿ ಕನಸು ಈಡೇರಿಸಿಕೊಳ್ಳುವ ಲಕ್ಷಾಂತರ ಯುವಕರ ಆಸೆಗೆ ಗ್ರಾಮೀಣ ಪ್ರದೇಶದ ದೂರಸಂಪರ್ಕ ಸಮಸ್ಯೆ ತಣ್ಣೀರೆರೆಚಿದೆ.
ಜನತಾ ಕರ್ಫ್ಯೂ, ಲಾಕ್ಡೌನ್ ಸಂದರ್ಭದಲ್ಲಿ ಲ್ಯಾಪ್ಟಾಪ್ ಸಹಿತ ಗ್ರಾಮಗಳಿಗೆ ತೆರಳಿದ್ದ ಯುವಕರು ಕರೊನಾ ತೀವ್ರತೆ ಇಳಿದ ಬಳಿಕ ನಗರಕ್ಕೆ ಮರಳುವ ಆತುರದಲ್ಲಿದ್ದಾರೆ. ಕಾರಣ ಮೊಬೈಲ್ ನೆಟ್ವರ್ಕ್ ಮತ್ತು ಇಂಟರ್ನೆಟ್ ಸಮಸ್ಯೆ. ಇದರಿಂದ ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗಷ್ಟೇ ಅಲ್ಲದೆ, ಆನ್ಲೈನ್ ತರಗತಿ, ಆನ್ಲೈನ್ ಕೌಶಲ ತರಬೇತಿ, ಪಡಿತರ ವಿತರಣೆ, ಆರೋಗ್ಯ ವ್ಯವಸ್ಥೆ ಸೇರಿ ಹಲವು ಸೇವೆಗಳನ್ನು ಪಡೆಯುವುದು ಹಳ್ಳಿಗಳಲ್ಲಿ ದುಃಸ್ಸಾಧ್ಯವಾಗಿದೆ. ಹೀಗಾಗಿ ಹಳ್ಳಿಗಳು ಮತ್ತೆ ವೃದ್ಧಾಶ್ರಮದಂತಾಗುವ ಅಪಾಯ ಎದುರಾಗಿದೆ.
ಅಗಾಧ ವ್ಯತ್ಯಾಸ: ರಸ್ತೆ, ಚರಂಡಿಯಂತಹ ಮೂಲಸೌಕರ್ಯದಲ್ಲಿ ಗ್ರಾಮ ಹಾಗೂ ನಗರಗಳ ನಡುವೆ ಇರುವ ಹತ್ತು ಪಟ್ಟು ಕಂದಕ ಡಿಜಿಟಲ್ ಮೂಲಸೌಕರ್ಯದಲ್ಲಿದೆ. 2020ರ ಫೆಬ್ರವರಿವರೆಗೆ ದೇಶದಲ್ಲಿದ್ದ 5.89 ಲಕ್ಷ ಮೊಬೈಲ್ ಟವರ್ ಪೈಕಿ ಕರ್ನಾಟಕದಲ್ಲಿ 38,410 ಟವರ್ ಇದ್ದವು. ಮಹಾರಾಷ್ಟ್ರ (45,758), ಆಂಧ್ರಪ್ರದೇಶವಷ್ಟೆ (44,736) ಅಲ್ಲದೆ ಮಧ್ಯಪ್ರದೇಶ (43,372) ಹಾಗೂ ಬಿಹಾರಕ್ಕಿಂತಲೂ (43,308) ಕಡಿಮೆ ಸಂಖ್ಯೆಯ ಟವರ್ ಕರ್ನಾಟಕದಲ್ಲಿದೆ. ದೇಶದ ನಗರ ಪ್ರದೇಶದಲ್ಲಿ ಇಂಟರ್ನೆಟ್ ಸಂರ್ಪತ ಮೊಬೈಲ್ ಗ್ರಾಹಕರ ಪ್ರಮಾಣ ಶೇ.93 ಇದ್ದರೆ ಗ್ರಾಮೀಣ ಪ್ರದೇಶದಲ್ಲಿ ಕೇವಲ 29.3. ಕಳೆದೊಂದು ವರ್ಷದಲ್ಲಿ ಈ ಮೂಲಸೌಕರ್ಯ ಕ್ಷೇತ್ರಕ್ಕೆ ವಿಶೇಷ ಗಮನಹರಿಸಿ ಅಭಿವೃದ್ಧಿಪಡಿಸಿದ್ದರೆ ಅನೇಕ ಯುವಕರು ಗ್ರಾಮಗಳಲ್ಲಿ ವಾಸಿಸುವ ಹಾಗೂ ಗ್ರಾಮೀಣ ಆರ್ಥಿಕತೆ ಉತ್ತಮಪಡಿಸುವ ಅವಕಾಶವಿತ್ತು.
ಕೆಲವೇ ಜಿಲ್ಲೆಗಳಿಗೆ ಸೀಮಿತ: ಸರ್ಕಾರಗಳು ಹೇಳುವ ಡಿಜಿಟಲ್ ಕ್ರಾಂತಿ ಕೇವಲ ನಗರ ಪ್ರದೇಶಗಳಿಗೆ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದವರೆಗೆ ಮಾತ್ರ ತಲುಪಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಉತ್ತಮ. ಆದರೆ, ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ತಾಲ್ಲೂಕು ಕೇಂದ್ರದಿಂದ ಐದಾರು ಕಿ.ಮೀ. ತೆರಳಿದರೂ ನೆಟ್ವರ್ಕ್ ಕೈಕೊಡುತ್ತದೆ. ವಿದ್ಯಾರ್ಥಿಗಳು ಆನ್ಲೈನ್ ತರಗತಿ ಮತ್ತು ಆನ್ಲೈನ್ ಪರೀಕ್ಷೆಗಳನ್ನು ವಿರೋಧಿಸುತ್ತಿರುವುದು ಕೂಡ ಇಂಥ ನೆಟ್ವರ್ಕ್ ಸಮಸ್ಯೆಯ ಕಾರಣಕ್ಕೆ.
ಪಡಿತರ ಪರದಾಟ: ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಪಡೆಯಲು ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಗಿದೆ. ಆದರೆ ಪ್ರತಿ ತಿಂಗಳು ನೆಟ್ವರ್ಕ್ ಸಮಸ್ಯೆಯಿಂದ ಬಯೋಮೆಟ್ರಿಕ್ ಕೆಲಸ ಮಾಡದೆ ಪಡಿತರದಾರರು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣ ಕನ್ನಡದ ಕಡಬ ತಾಲ್ಲೂಕಿನ ಕೆಂಜಾಳ ಗ್ರಾಮದಲ್ಲಿ ಪಡಿತರ ನೀಡಲು ನೆಟ್ವರ್ಕ್ ಸಿಗದೆ ಅಧಿಕಾರಿಗಳು ಲ್ಯಾಪ್ಟಾಪ್ ಹಿಡಿದು ಬೆಟ್ಟದ ಮೇಲೆ ಕುಳಿತರೂ ನೆಟ್ವರ್ಕ್ ಸಿಗದೆ ಬರಿಗೈಲಿ ಹಿಂದಿರುಗುವಂತಾಯ್ತು.
ಆನ್ಲೈನ್ ಪೇಮೆಂಟ್: ಡಿಮಾನಿಟೈಸೇಷನ್, ಕರೊನಾ ನಂತರ ನಗರದಲ್ಲಿ ಸಾಮಾನ್ಯವಾಗಿರುವ ಆನ್ಲೈನ್ ಪಾವತಿ ವ್ಯವಸ್ಥೆ ಗ್ರಾಮೀಣ ಪ್ರದೇಶದಲ್ಲಿ ಕಾಣುವುದೇ ಇಲ್ಲ. ಅದೇ ರೀತಿ ವಿದ್ಯಾವಂತರು ತಮ್ಮ ಮೊಬೈಲ್ ಮೂಲಕವೇ ನಡೆಸಬಹುದಾದ ಬ್ಯಾಂಕಿಂಗ್ ವಹಿವಾಟಿಗೂ ನೆಟ್ವರ್ಕ್ ಅಡ್ಡವಾಗಿದೆ.
ಊರಿನಲ್ಲಿ ಇರುವಂತಿಲ್ಲ: ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಮ್ ಅವಕಾಶ ಲಭಿಸಿದ್ದರಿಂದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ರಾಘವ್ ಹಳ್ಳಿಗೆ ಮರಳಿದ್ದರು. ಆದರೆ ಅಲ್ಲಿ ಇಂಟರ್ನೆಟ್ ಇರಲಿ, ಮೊಬೈಲ್ ನೆಟ್ವರ್ಕ್ ಕೂಡ ಇರಲಿಲ್ಲ. ಊರಿನಿಂದ 5 ಕಿ.ಮೀ. ದೂರದಲ್ಲಿರುವ ಪಟ್ಟಣದಲ್ಲಿ ರೂಂ ಮಾಡಿಕೊಂಡು ಕೆಲಸ ಆರಂಭಿಸಿದರು. ಆದರೆ ಅಲ್ಲಿ ಕರೆಂಟ್ ಇದ್ದರೆ ಮಾತ್ರ ಮೊಬೈಲ್ ಟವರ್ ಕೆಲಸ ಮಾಡುತ್ತಿತ್ತು. ಜನರೇಟರ್ ಬಳಸಿದರೆ ಆರ್ಥಿಕವಾಗಿ ವರ್ಕೌಟ್ ಆಗುವುದಿಲ್ಲ ಎಂಬುದು ನಿರ್ವಾಹಕರ ಸಮಸ್ಯೆ. ಒಂದೇ ತಿಂಗಳಿಗೆ ರೂಮ್ ಖಾಲಿ ಮಾಡಿ ತಾಲ್ಲೂಕು ಕೇಂದ್ರ ಸಿದ್ದಾಪುರದಲ್ಲಿ ರೂಂ ಮಾಡುವುದು ಅನಿವಾರ್ಯವಾಯಿತು. ಅಲ್ಲಿಗೆ ಹಳ್ಳಿಗೆ ಮರಳಿ ಏನು ಉಪಯೋಗ ಎನ್ನುವುದು ಅವರ ಪ್ರಶ್ನೆ.
ಆನ್ಲೈನ್ ತರಗತಿ, ತರಬೇತಿ: ಶಾಲೆಗಳ ಜತೆಗೆ ಕಾಲೇಜುಗಳಲ್ಲಿ ಆನ್ಲೈನ್ ತರಗತಿಗಳೇ ನಡೆಯುತ್ತಿವೆ. ತಮ್ಮ ಗ್ರಾಮದಲ್ಲಿ ನೆಟ್ವರ್ಕ್ ಇಲ್ಲದೆ ಅನೇಕರು ಕಾಲೇಜಿಗೆ ಗೈರಾಗಿದ್ದರೆ, ಕೆಲವರು ನಗರದಲ್ಲಿರುವ ಸ್ನೇಹಿತರ, ಕುಟುಂಬಸ್ಥರ ಮನೆಯಲ್ಲಿದ್ದು ಹಾಜರಾಗುವಂತಾಗಿದೆ.