

ನವದೆಹಲಿ: ಏಳು ದಶಕಗಳ ಕಾಲ ಜಲ ಸಂಪರ್ಕ ನಾಯಕರ ಮನೆ ಮತ್ತು ಈಜುಕೊಳಗಳಿಗೆ ಖಾತರಿಯಾಗಿತ್ತು. ಹೀಗಾಗಿ ದೇಶದಲ್ಲಿ 70 ವರ್ಷದಲ್ಲಿ 3 ಕೋಟಿ ನೀರಿನ ಸಂಪರ್ಕ ಮಾತ್ರ ಸಾಧ್ಯವಾಗಿತ್ತು. ಈಗ ಎರಡೇ ವರ್ಷದಲ್ಲಿ 5 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು. ಹಿಂದಿನ ಕಾಂಗ್ರೆಸ್ ಆಡಳಿತದ ವೈಫಲ್ಯದತ್ತ ಬೆಟ್ಟು ಮಾಡಿ ತೋರಿಸಿದರು.
ರಾಷ್ಟ್ರೀಯ ಜಲಜೀವನ ಕೋಶ ಮತ್ತು ಆಪ್ಗೆ ಚಾಲನೆ ನೀಡಿದ ಅವರು, ಪಾನಿ ಸಮಿತಿ (ಗ್ರಾಮ ಜಲ ಮತ್ತು ನೈರ್ಮಲ್ಯ ಸಮಿತಿ)ಯ ಸದಸ್ಯರ ಜತೆಗೆ ಸಂವಾದ ನಡೆಸಿದರು. ‘ದೇಶಾದ್ಯಂತ 80 ಜಿಲ್ಲೆಗಳ 1.25 ಲಕ್ಷ ಗ್ರಾಮಗಳಲ್ಲಿನ ಪ್ರತಿಯೊಂದು ಮನೆಗೂ ಇಂದು ಕುಡಿಯುವ ಶುದ್ಧ ನೀರಿನ ಸಂಪರ್ಕ ಸಿಕ್ಕಿದೆ. ಜಲ ಜೀವನ್ ಮಿಷನ್ 2019ರಲ್ಲಿ ಜಾರಿಗೊಂಡಿದ್ದು ಇದುವರೆಗೆ 5 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ಇದು ಇಂದಿನ ಭಾರತ. ಹಿಂದೆ ಇದೇ ಕೆಲಸ ಪೂರ್ಣಗೊಳ್ಳುವುದಕ್ಕೆ 70 ವರ್ಷ ಬೇಕಾಯಿತು. ಈಗ ಎರಡೇ ವರ್ಷದಲ್ಲಿ ಅದಕ್ಕೂ ಹೆಚ್ಚಿನ ಕೆಲಸ ಪೂರ್ಣವಾಗಿದೆ. ಜಲಜೀವನ್ ಮಿಷನ್ ಕೇವಲ ನೀರಿನ ಸಂಪರ್ಕ ಒದಗಿಸುವ ಯೋಜನೆಯಲ್ಲ. ಇದು ವಿಕೇಂದ್ರೀಕರಣದ ಚಳವಳಿಯಾಗಿದ್ದು, ಗ್ರಾಮ ಮತ್ತು ಮಹಿಳಾ ಚಾಲಿತ ಯೋಜನೆಯಾಗಿದೆ. ಪೈಪ್ ನೀರಿನ ಸಂಪರ್ಕ 31 ಲಕ್ಷ ಇದ್ದದ್ದು ಇಂದು 1.16 ಕೋಟಿಗೂ ಅಧಿಕ ಆಗಿದೆ. ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾದರೆ ದೇಶದ ಯಾವುದೇ ಭಾಗಕ್ಕೂ ಟ್ಯಾಂಕರ್ ಅಥವಾ ಟ್ರೇನ್ ಮೂಲಕ ನೀರು ಸಾಗಿಸುವ ಸನ್ನಿವೇಶ ಉಂಟಾಗದು ಎಂದು ಪ್ರಧಾನಿ ವಿವರಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಆಡಳಿತವನ್ನು ಪರೋಕ್ಷವಾಗಿ ಟೀಕಿಸಿದ ಪ್ರಧಾನಿ ಮೋದಿ, ಬಡತನ ಅವರ ಪಾಲಿಗೆ ಒಂದು ಆಕರ್ಷಣೆಯಾಗಿತ್ತು. ಮಾದರಿ ಗ್ರಾಮ ನಿರ್ವಿುಸುವುದಕ್ಕೆ ಅವರು ಪ್ರಯತ್ನಿಸಬಹುದಾಗಿತ್ತು. ಆದರೆ, ಅವರು ರಾಜಕೀಯ ಲಾಭಕ್ಕಾಗಿ ಗ್ರಾಮಗಳಲ್ಲಿನ ಕೊರತೆಯನ್ನೇ ನೆಚ್ಚಿಕೊಂಡು ಬಂದರು ಎಂದು ವಾಗ್ದಾಳಿ ನಡೆಸಿದರು.
ಆ್ಯಪ್ ಮತ್ತು ಕೋಶಕ್ಕೆ ಚಾಲನೆ: ರಾಷ್ಟ್ರೀಯ ಜಲ ಜೀವನ್ ಕೋಶ್ ಮತ್ತು ಜಲ ಜೀವನ್ ಮಿಶನ್ ಆಪ್ಗಳನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ಪಾಲುದಾರರಲ್ಲಿ ಜಾಗೃತಿ ಮೂಡಿಸುವುದಕ್ಕೆ ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆ, ಬದ್ಧತೆಯನ್ನು ತರುವ ಉದ್ದೇಶದಿಂದ ಆಪ್ ಲೋಕಾರ್ಪಣೆ ಮಾಡಲಾಗಿದೆ. ಇದೇ ರೀತಿ, ರಾಷ್ಟ್ರೀಯ ಜಲ ಜೀವನ್ ಕೋಶ್ ಮೂಲಕ ನೀರಿನ ಸಂಪರ್ಕವನ್ನು ಗ್ರಾಮೀಣ ಮಟ್ಟದಲ್ಲಿ ವಿಸ್ತರಿಸುವುದು ಇದರ ಉದ್ದೇಶವಾಗಿದೆ.
ದೇವರಹಿಪ್ಪರಗಿ: ತಾಲೂಕಿನ ಕೋರವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಕಾನಹಳ್ಳಿ ಗ್ರಾಮದಲ್ಲಿನ ಜಲಜೀವನ್ ಮಿಷನ್ ಅನುಷ್ಠಾನ ಕುರಿತು ಪ್ರಧಾನಿ ಜತೆ ನೇರ ಸಂವಾದ ನಡೆಯಿತು. ಇಡೀ ದೇಶದಲ್ಲಿಯೇ11 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಕರ್ನಾಟಕದಿಂದ ಒಂದು ಗ್ರಾಮ ಆಯ್ಕೆಯಾಗಿತ್ತು. ಪ್ರಧಾನಿ ಮೋದಿಯವರು ವರ್ಚ್ಯುವಲ್ ಸಭೆ ಮೂಲಕ ಸಂವಾದ ನಡೆಸಿ ಈ ಗ್ರಾಮದಲ್ಲಿ ಜಲಜೀವನ್ ಮಿಷನ್ ಅನುಷ್ಠಾನವನ್ನು ವೀಕ್ಷಿಸಿದರು. ಆದರೆ ತಾಂತ್ರಿಕ ಕಾರಣದಿಂದ ಪ್ರಧಾನಿ ಜತೆಗೆ ಮಾತನಾಡಲು ಆಗಲಿಲ್ಲ. ಪ್ರಧಾನಿ ಜತೆಗೆ ಸಂವಾದಕ್ಕೆ ನಮ್ಮ ಪಂಚಾಯಿತಿ ಆಯ್ಕೆಯಾಗಿದ್ದು ಸಂತಸ ತಂದಿದೆ. ನಾವು ಕೈಕೊಂಡ ಕಾರ್ಯಗಳನ್ನು ಸ್ವತಃ ಪ್ರಧಾನಿಗಳು ವೀಕ್ಷಣೆ ಮಾಡಿರುವುದು ಸಂತಸ ಇಮ್ಮಡಿಗೊಳಿಸಿದಂತಾಗಿದೆ ಎಂದು ಗ್ರಾಪಂ ಅಧ್ಯಕ್ಷ ರಾಜಶೇಖರ ಛಾಯಾಗೋಳ ಹೇಳಿದ್ದಾರೆ. ತಾಪಂ ಇಒ ಮಹೇಶಕುಮಾರ ಮಾಲಗಿತ್ತಿ, ನೋಡಲ್ ಅಧಿಕಾರಿ ಬಸವರಾಜ ಜಗಳೂರ, ಪಿಡಿಒ ಎಸ್.ಎಸ್. ಗಣಾಚಾರಿ, ಗ್ರಾಪಂ ಉಪಾಧ್ಯಕ್ಷ ಬಸನಗೌಡ ಬಿರಾದಾರ, ಗ್ರಾಪಂ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಇದ್ದರು.
ನವದೆಹಲಿ: ಕಾಂಗ್ರೆಸ್ ಸೇರಿ ಹಲವು ರಾಜಕೀಯ ಪಕ್ಷಗಳು ಮೂರು ಕೃಷಿ ಕಾನೂನುಗಳ ವಿಚಾರದಲ್ಲಿ ‘ಬೌದ್ಧಿಕ ಅಪ್ರಾಮಾಣಿಕತೆ’ಯನ್ನು ತೋರಿಸುತ್ತಿವೆ. ‘ರಾಜಕೀಯ ವಂಚನೆ’ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದಾರೆ.
‘ಓಪನ್’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಅವರು, ದಶಕಗಳ ಹಿಂದೆಯೇ ಪೌರರಿಗೆ ಸಿಗಬೇಕಾಗಿದ್ದ ಸವಲತ್ತುಗಳನ್ನು ಒದಗಿಸುವುದಕ್ಕಾಗಿ ಕಠಿಣ ಮತ್ತು ದೊಡ್ಡ ನಿರ್ಣಯಗಳನ್ನು ತೆಗೆದುಕೊಂಡಾಗ ಅದನ್ನು ಬೆಂಬಲಿಸುವ ಬದಲು ತಡೆಯುವ ಪ್ರಯತ್ನವನ್ನು ಇವರು ಮಾಡುತ್ತಿದ್ದಾರೆ. ರಾಜಕೀಯ ಪಕ್ಷವಾಗಿ ಒಂದು ಭರವಸೆಯನ್ನು ನೀಡಿದ ಬಳಿಕ ಅದನ್ನು ಈಡೇರಿಸಲು ವಿಫಲವಾದ ಪಕ್ಷ, ಆಡಳಿತದಲ್ಲಿ ಇಲ್ಲದೇ ಇದ್ದಾಗ ಯೂಟರ್ನ್ ಹೊಡೆದು ಅದರದ್ದೇ ಭರವಸೆಯನ್ನು ನಿರಾಕರಿಸುವ ಬೌದ್ಧಿಕ ಅಪ್ರಾಮಾಣಿಕತೆಯನ್ನು ತೋರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಳಿತಿಗಾಗಿ ಕಠಿಣ ನಿರ್ಧಾರ: ದೇಶವಾಸಿಗಳಿಗೆ ಸಿಗಬೇಕಾದ ಸೌಲಭ್ಯಕ್ಕೆ ದಶಕಗಳ ಕಾಲ ಕಾಯುವಂತಾಗಬಾರದು. ಆದರೆ, ಏಳು ದಶಕಗಳನ್ನು ಅವಲೋಕಿಸಿದರೆ ಜನರು ತಮಗೆ ಸಿಗಬೇಕಾದ ಸವಲತ್ತುಗಳಿಗಾಗಿ ಕಾಯುತ್ತಲೇ ಇದ್ದಾರೆ. ಇನ್ನು ಈ ರೀತಿ ಆಗಬಾರದು. ಅದಕ್ಕಾಗಿ ಕಠಿಣವಾದರೂ ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಮೋದಿ ವಿವರಿಸಿದರು.
ಸ್ವಾರ್ಥ ರಾಜಕಾರಣಕ್ಕೆ ಕಾನೂನು ಬಲಿ: ಕೆಲ ರಾಜಕೀಯ ನಾಯಕರು, ಪಕ್ಷಗಳು ಮತ್ತು ಸಂಘಟನೆಗಳ ಸ್ವಾರ್ಥ ರಾಜಕಾರಣದಿಂದ ಕೃಷಿಗೆ ಸಂಬಂಧಿಸಿದ ಹೊಸ ಕಾನೂನು ಸರ್ವವ್ಯಾಪಿಯಾಗಿ ಅನ್ವಯಿಸುವುದು ಸಾಧ್ಯವಾಗಿಲ್ಲ. ವಿಶೇಷವಾಗಿ ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣದ ಕೆಲವು ಭಾಗದ ಒಂದು ಬಣದ ರೈತರು ಪ್ರತಿಭಟನೆ ನಡೆಸುತ್ತಿರುವುದು ಇದೇ ಕುಮ್ಮಕ್ಕಿನೊಂದಿಗೆ ಎಂಬುದು ಗಮನಾರ್ಹ. ರೈತ ಸಂಘಟನೆಗಳೊಂದಿಗೆ ಕುಳಿತು ಮಾತುಕತೆ ನಡೆಸಲು ಸರ್ಕಾರ ಸಿದ್ಧವಾಗಿದೆ. ಲೋಪ ದೋಷಗಳನ್ನು ಸರಿಪಡಿಸುವುದಕ್ಕೂ ಮುಕ್ತವಾಗಿದೆ. ಆದರೆ, ಪ್ರತಿಭಟನಾ ನಿರತರಿಗೆ ಪ್ರಜಾಪ್ರಭುತ್ವದ ಮಾತುಕತೆಯಲ್ಲಿ ವಿಶ್ವಾಸವಿಲ್ಲ. ಕಾನೂನು ರದ್ದುಗೊಳಿಸುವುದನ್ನೇ ಆಗ್ರಹಿಸುತ್ತಿದ್ದಾರೆ. ಇದು ಸರಿಯಾದ ನಡೆಯಲ್ಲ ಎಂದು ಪ್ರಧಾನಿ ಹೇಳಿದರು.