ವಾರಕ್ಕೆ 80-90 ತಾಸು ಕೆಲಸ ಮಾಡಿ

6-67c49de0f3894
Published on

ನವದೆಹಲಿ: ವಾರಕ್ಕೆ 80 ತಾಸಿರಲಿ ಅಥವಾ 90 ತಾಸಿರಲಿ, ಭಾರತೀಯರು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ನೀತಿ ಆಯೋಗದ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಹೇಳಿದ್ದಾರೆ.

ಆಂಗ್ಲ ಪತ್ರಿಕೆಯೊಂದರ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಾರ್ಡ್​ವರ್ಕ್​ನಲ್ಲಿ ನನಗೆ ಅತೀವ ನಂಬಿಕೆ ಇದೆ. ಭಾರತವನ್ನು 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 30 ಟ್ರಿಲಿಯನ್ ಆರ್ಥಿಕತೆಯಾಗಿ ಪರಿವರ್ತಿಸಬೇಕೆಂದರೆ ಎಲ್ಲರೂ ವಾರಕ್ಕೆ 80-90 ತಾಸು ಕೆಲಸ ಮಾಡಬೇಕಾಗುತ್ತದೆ. ಸುಮ್ಮನೆ ಮನರಂಜನೆಯಿಂದ ಅಥವಾ ಸಿನಿಮಾ ಸ್ಟಾರ್​ಗಳನ್ನು ಫಾಲೋ ಮಾಡುವುದರಿಂದ ಈ ಸಾಧನೆ ಮಾಡಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಲವಾದ ಕೆಲಸದ ನೀತಿಯಿಂದಲೇ ಜಪಾನ್, ದಕ್ಷಿಣ ಕೊರಿಯಾ, ಚೀನಾ ಮುಂತಾದ ದೇಶಗಳು ಆರ್ಥಿಕ ಯಶಸ್ಸನ್ನು ಸಾಧಿಸಿವೆ. ಭಾರತ ಜಗತ್ತಿನ ಅತಿ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಬೇಕೆಂದರೆ, ಅಂತಹುದೇ ಮನಸ್ಥಿತಿಯನ್ನು ಭಾರತೀಯರೂ ಬೆಳೆಸಿಕೊಳ್ಳಬೇಕಾಗಿದೆ. ಇತ್ತೀಚೆಗೆ ಕಷ್ಟಪಟ್ಟು ಕೆಲಸ ಮಾಡುವುದರ ವಿರುದ್ಧ ಮಾತಾಡುವುದೇ ಫ್ಯಾಷನ್ ಆಗಿಬಿಟ್ಟಿದೆ. ಆ ಮೂಲಕ ನಾವು ಯುವಜನತೆಗೆ ತಪ್ಪು ಸಂದೇಶ ಕಳಿಸುತ್ತಿದ್ದೇವೆ. ಶಿಸ್ತಿನಿಂದ ಕೆಲಸದ ಶೆಡ್ಯೂಲ್ ರೂಪಿಸಿಕೊಂಡರೆ ವೈಯಕ್ತಿಕ ಜೀವನಕ್ಕೂ ಸಾಕಷ್ಟು ಸಮಯ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net