

ಮುಂಬೈ: ತಮ್ಮ ಸಿಂಪ್ಲಿಸಿಟಿ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟಿ ಸಾಯಿ ಪಲ್ಲವಿ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ನಟನೆಯ ರಾಮಾಯಣ ಚಿತ್ರದ ಶೂಟಿಂಗ್ನಲ್ಲಿ ಸಾಯಿ ಪಲ್ಲವಿ ಬ್ಯುಸಿಯಿದ್ದು, ಕೆಲ ದಿನಗಳ ಹಿಂದೆ ಶೂಟಿಂಗ್ ಸೆಟ್ನ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇದೀಗ ನಟಿ ಸಾಯಿ ಪಲ್ಲವಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಇದಕ್ಕೆ ಆಕ್ಷೇಪಿಸುತ್ತಿದ್ದಾರೆ. ನಿಮ್ಮಿಂದ ಈ ಹೇಳಿಕೆ ನಿರೀಕ್ಷಿಸಿರಲಿಲ್ಲ. ಯಾವುದೇ ಕಾರಣಕ್ಕೂ ನಾವು ರಾಮಾಯಣವನ್ನು ನೋಡುವುದಿಲ್ಲ ಎಂದು ಜನರು ಕಮೆಂಟ್ ಹಾಕುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ನಾನು ತಟಸ್ಥ ವಾತಾವರಣದಲ್ಲಿ ಬೆಳೆದಿದ್ದೇನೆ. ನಾನು ಎಡಪಂಥೀಯ ಮತ್ತು ಬಲಪಂಥೀಯರ ಬಗ್ಗೆ ಕೇಳಿದ್ದೇನೆ. ಆದರೆ, ಯಾರು ಸರಿ ಮತ್ತು ಯಾರು ತಪ್ಪು ಎಂದು ನಾನು ಹೇಳಲಾರೆ. ಕಾಶ್ಮೀರಿ ಪಂಡಿತರನ್ನು ಹೇಗೆ ಹತ್ಯೆ ಮಾಡಲಾಯಿತು ಎಂದು ದಿ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ತೋರಿಸಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಮುಸ್ಲಿಂ ವ್ಯಕ್ತಿಯೊಬ್ಬ ಅಕ್ರಮವಾಗಿ ಹಸು ಸಾಗಿಸುತ್ತಿದ್ದ ಎಂದು ಆರೋಪಿಸಿ ಆತನನ್ನು ಹತ್ಯೆ ಮಾಡಲಾಯಿತು. ಹತ್ಯೆ ಬಳಿಕ ಅಲ್ಲಿದ್ದವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಇವೆರಡನ್ನು ನೋಡಿದರೆ ಕಾಶ್ಮೀರದಲ್ಲಿ ಮತ್ತು ಇಲ್ಲಿ ನಡೆದ ಘಟನೆಗೆ ಏನು ವ್ಯತ್ಯಾಸವಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ನಟಿ ಸಾಯಿ ಪಲ್ಲವಿ ಹೇಳಿದ್ದಾರೆ.
ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ನಟಿಯ ಹೇಳಿಕೆಯನ್ನು ಖಂಡಿಸಿದ್ದು, ಯಾವುದೇ ಕಾರಣಕ್ಕೂ ನಿಮ್ಮ ಅಅಭಿನಯದ ಚಿತ್ರಗಳನ್ನು ನೋಡುವುದಿಲ್ಲ. ನಿಮ್ಮ ಹೇಳಿಕೆಗೆ ಈ ಕೂಡಲೇ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.