ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಜಾರಿ ನಿಶ್ಚಿತ: ಬಿವೈಆರ್

byr
ಅಖಿಲ ಭಾರತ ಕವಯಿತ್ರಿ(ಎಐಪಿಸಿ) ಯರ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಡಾ. ಜಿ.ಎಸ್.ಸರೋಜಾ, ಮನೋಮತಿ ಕುರ್ಮಿ, ಡಾ. ಲಾರಿ ಆಜಾದ್, ದೀಪಾ ಇದ್ದರು.
Published on

ಶಿವಮೊಗ್ಗ: ಸಂಸತ್‌ನಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಬೇಕೆಂಬುದು ಕೇಂದ್ರ ಸರ್ಕಾರದ ಆಶಯ. ಮುಂಬರುವ ಅಧಿವೇಶನದಲ್ಲೇ ಮಹಿಳಾ ಮೀಸಲಾತಿ ಜಾರಿಯಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

24ನೇ ಅಖಿಲ ಭಾರತ ಕವಯಿತ್ರಿ(ಎಐಪಿಸಿ) ಯರ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀಸಲಾತಿ ಹೊರತಾಗಿಯೂ ಪ್ರಸ್ತುತ ಲೋಕಸಭೆಯ 543 ಸದಸ್ಯರ ಪೈಕಿ 78 ಮಹಿಳೆಯರಿದ್ದಾರೆ. ಶೇ.33 ಮೀಸಲಾತಿ ಜಾರಿಯಾದರೆ 180ಕ್ಕೆ ಏರಿಕೆಯಾಗುತ್ತದೆ ಎಂದು ಹೇಳಿದರು.

ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಶಿಕ್ಷಣ, ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಮುಂದಿದ್ದಾರೆ. ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ನೆಲದಲ್ಲಿ ಈ ಸಮ್ಮೇಳನಕ್ಕೆ ಚಾಲನೆ ಸಿಕ್ಕಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸೌಟು ಹಿಡಿಯುವ ಕೈಗಳು ಲೇಖನಿಯನ್ನೂ ಹಿಡಿಯಬಲ್ಲವು ಎಂಬುದಕ್ಕೆ ಈ ಸಮ್ಮೇಳನವೇ ಸಾಕ್ಷಿ. ಲೇಖನಿಯಿಂದ ಈ ದೇಶದ ಸಂಸ್ಕೃತಿಯ ಉನ್ನತೀಕರಣ ಸಾಧ್ಯ. ವಿಶ್ವದಲ್ಲೇ ಭಾರತದಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನವಿದೆ. ಅವಳು ಸಂಸ್ಕೃತಿಯ ಪ್ರತೀಕವೂ ಹೌದು. ಇಂತಹ ಸಮ್ಮೇಳನ ಶಿವಮೊಗ್ಗದಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಎಐಪಿಸಿ ಅಧ್ಯಕ್ಷೆ ಮನೋಮತಿ ಕುರ್ಮಿ, ಈ ಸಮ್ಮೇಳನ ಬರವಣಿಗೆಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರ ಹಕ್ಕುಗಳು ಮರುಸ್ಥಾಪನೆ ಆಗಬೇಕೆಂಬ ಹಂಬಲದಿಂದಲೇ ಈ ವೇದಿಕೆ ಆರಂಭಗೊಂಡಿದೆ. ಪುರುಷರು ಮಹಿಳಾ ಸಂಘಗಳನ್ನು ಕಟ್ಟುವ ಸಂದರ್ಭ ತುಂಬ ವಿರಳವಾಗಿದ್ದ ಸಂದರ್ಭದಲ್ಲಿ ಡಾ. ಲಾರಿ ಅಜಾದ್ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದರು ಎಂದು ತಿಳಿಸಿದರು.

ಎಐಪಿಸಿ ಪ್ರಧಾನ ಕಾರ್ಯದರ್ಶಿ ಡಾ. ಜಿ.ಎಸ್.ಸರೋಜಾ ಮಾತನಾಡಿ, ಮಹಿಳಾ ಸುರಕ್ಷತೆಯೇ ದೇಶದ ಗೌರವ ಎಂಬ ಧ್ಯೇಯ ವಾಕ್ಯದೊಡನೆ ಈ ಸಮ್ಮೇಳನ ಆಯೋಜಿಸಿದ್ದೇವೆ. ಸುಮಾರು 13,500 ಲೇಖಕಿಯರು ನಮ್ಮ ಸಂಸ್ಥೆಯಲ್ಲಿದ್ದಾರೆ. ರಾಜ್ಯದಲ್ಲಿ ಮೂರು ಸಾವಿರ ಲೇಖಕಿಯರಿದ್ದಾರೆ. ನಮ್ಮ ಸಂಘಟನೆ ರಜತಮಹೋತ್ಸವದ ಹೊಸ್ತಿಲಲ್ಲಿದೆ. ಸಮ್ಮೇಳನದಲ್ಲಿ ಮಹಿಳೆಯರ ಸಮಸ್ಯೆಗಳು, ಸಾಮರಸ್ಯ, ಮಹಿಳಾ ಶಕ್ತಿ ಕುರಿತು ವಿಚಾರ ಸಂಕಿರಣ, ಕವಿಗೋಷ್ಠಿಗಳು ನಡೆಯಲಿವೆ ಎಂದರು.

ಲೇಖಕಿಯರಾದ ಪ್ರೊ. ಪಿ.ಆರ್.ಮಮತಾ, ಡಾ. ವಿಜಯಾದೇವಿ, ಡಾ. ವೀಣಾ ಭಟ್, ಸವಿತಾ ನಾಗಭೂಷಣ್, ಉಷಾ ನಟೇಶ್, ಗೀತಾಂಜಲಿ ಪ್ರಸನ್ನಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net