

ಎನ್.ಆರ್.ಪುರ: ಮಹಿಳೆಯರಲ್ಲಿ ಅದ್ಭುತ ಪ್ರತಿಭೆ ಇದ್ದು ಕೀಳರಿಮೆ ತೊರೆದು ಆತ್ಮವಿಶ್ವಾಸದಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗುವ ಮೂಲಕ ಸಾಧನೆ ಪಥದಲ್ಲಿ ಸಾಗಬೇಕು ಎಂದು ಕೊಪ್ಪ ಗಾಯತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆ ಮಂಗಳಾ ಪ್ರವೀಣ್ ಹೇಳಿದರು.
ಭಾನುವಾರ ಕುದುರೆಗುಂಡಿ ಅಶ್ವ ಗುಂಡೇಶ್ವರ ಸಭಾ ಭವನದಲ್ಲಿ ಗಾಯತ್ರಿ ವಿಪ್ರ ಮಹಿಳಾ ಬಳಗದಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕ ಮಹಿಳೆಯರಿಗೆ ಸನ್ಮಾನ ಹಾಗೂ ಆಟೋಟ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಎಲ್ಲ ರಂಗದಲ್ಲೂ ಸಾಧನೆ ಮಾಡಿದ್ದಾರೆ. ಹಲವು ಕಲೆಗಳಲ್ಲಿ ನೈಪುಣ್ಯ ಹೊಂದಿದ್ದಾರೆ. ಈ ಹಿಂದೆ ಸ್ತ್ರೀಯರ ಮೇಲೆ ಹೆಚ್ಚಿನ ದೌರ್ಜನ್ಯ ನಡೆಯುತ್ತಿತ್ತು. ಪ್ರಸ್ತುತ ಪರಿಸ್ಥಿತಿ ಬದಲಾಗಿದ್ದು ಮಹಿಳೆ ಉನ್ನತ ಶಿಕ್ಷಣ ಪಡೆದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರು.
ಹರಿಹರಪುರದ ಸಂಸ್ಕಾರ ಭಾರತಿ ರಂಗೋಲಿ ಕಲಾವಿದೆ ಸುವರ್ಣ ಕೇಶವ್ ಮಾತನಾಡಿ, ಪ್ರತಿಯೊಬ್ಬ ಮಹಿಳೆ ರಂಗೋಲಿ ಕಲೆಯನ್ನು ಮುಂದುವರಿಸಿಕೊಂಡು ಹೋಗಬೇಕು. ವಿಪ್ರ ಸಮಾಜದವರು ಇತರರಿಗೆ ಮಾರ್ಗದರ್ಶಕರಾಗಬೇಕು. ಮಹಿಳೆಯರು ಮಕ್ಕಳಿಗೆ ಸಂಸ್ಕಾರ ನೀಡಬೇಕು. ನಮ್ಮ ಸಂಪ್ರದಾಯ, ಸಂಸ್ಕೃತಿ ಬೆಳೆಸಬೇಕು ಎಂದು ತಿಳಿಸಿದರು.
ಗಾಯತ್ರಿ ವಿಪ್ರ ಮಹಿಳಾ ಬಳಗದಿಂದ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಉಪಯೋಗವಾಗುವ ಆರೋಗ್ಯ, ರಂಗೋಲಿ, ಕಲೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಮಾಹಿತಿ ಶಿಬಿರಗಳನ್ನು ಆಯೋಜಿಸಲಿದ್ದೇವೆ ಎಂದರು.
ಗಾಯತ್ರಿ ವಿಪ್ರ ಮಹಿಳಾ ಬಳಗದ ಪ್ರಧಾನ ಕಾರ್ಯದರ್ಶಿ ಸುಮಾ ನಾರಾಯಣಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯೆ ಲತಾ ಸುಬ್ರಹ್ಮಣ್ಯ, ಮಮತಾ ಪ್ರಭಾಕರ್, ಹರಿಹರಪುರದ ಸುವರ್ಣಾ ಕೇಶವ್, ಕೊಪ್ಪದ ಮಂಗಳಾ ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾವರದರಾಜ್, ಜ್ಯೋತಿನರಸಿಂಹ, ವಿಜಯಾ, ಪಲ್ಲವಿ. ಸುಧಾ ಇತರರಿದ್ದರು.