

ಬೆಂಗಳೂರು: ಈಜು ಶಿಬಿರಕ್ಕೆ ಬಂದಿದ್ದ ಮಹಿಳೆಯ ಬ್ಯಾಗ್‌ನಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮಹಿಳಾ ಕೋಚ್ ಅನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಸುಬ್ರಮಣ್ಯಪುರ ಗೌಡನಪಾಳ್ಯ ನಿವಾಸಿ ಮಮತಾ (34) ಬಂಧಿತ ಮಹಿಳೆ. ಕಳವು ಮಾಡಿದ್ದ 3 ಲಕ್ಷ ರೂ. ಮೌಲ್ಯದ 46 ಗ್ರಾಂ ಚಿನ್ನದ ಸರವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಕಪುರ ಮುಖ್ಯರಸ್ತೆಯ ನಾರಾಯಣನಗರದ ಮಹಿಳೆಯೊಬ್ಬರು, ತಲಘಟ್ಟಪುರದ ಕೆಂಬತ್ತನಹಳ್ಳಿಯಲ್ಲಿರುವ ಸ್ವಿಮ್ ಸ್ಕ್ವೇರ್ ಸ್ವಿಮ್ಮಿಂಗ್‌ಪುಲ್‌ಗೆ ಜು.7ರಂದು ಈಜು ಶಿಬಿರಕ್ಕೆ ಬಂದಿದ್ದರು. ಚಿನ್ನದ ಸರ, ಎರಡು ಬಳೆಗಳನ್ನು ತೆಗೆದು ಬ್ಯಾಗ್‌ಸಮೇತ ಲಾಕರ್‌ನಲ್ಲಿ ಇಟ್ಟಿದ್ದರು. ಈಜಾಡಿ ವಾಪಸ್ ಬಂದು ನೋಡಿದಾಗ, ಚಿನ್ನದ ಸರ ಕಳವಾಗಿತ್ತು. ಎಲ್ಲರನ್ನು ಕೇಳಿದ ಮಹಿಳೆ, ಕೊನೆಗೆ ತಲಘಟ್ಟಪುರ ಠಾಣೆಗೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡು ಸ್ವಿಮ್ಮಿಂಗ್ ಕೋಚ್ ಮಮತಾ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಕದ್ದ ಚಿನ್ನದ ಸರವನ್ನು ತನ್ನ ಸ್ನೇಹಿತೆಗೆ ಮಾರಾಟ ಮಾಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.