

ಆಲಿಘರ್: ವರದಕ್ಷಿಣೆಗಾಗಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ಘಟನೆಯೊಂದು ಉತ್ತರಪ್ರದೇಶದ ಆಲಿಘರ್ನಲ್ಲಿ ನಡೆದಿದ್ದು, ಸೊಸೆಗೆ ಮನಬಂದಂತೆ ಹೊಡೆಯುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು, ಪೊಲೀಸರಿಗೆ ಸಾಕ್ಷಿಯಾಗಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಅತ್ತೆಯ ಕ್ರೂರತ್ವಕ್ಕೆ ಹಿಡಿಶಾಪ ಹಾಕಿದ್ದಾರೆ.
ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಥಳಿಸಿದ ಅತ್ತೆ, ತನ್ನ ಮಗನಿಗೆ ಸೊಸೆಯ ತಂದೆಯ ಮನೆಯವರು ಹೊಸ ಬೈಕ್ನ ವರದಕ್ಷಿಣೆಯಾಗಿ ಕೊಡಬೇಕಿತ್ತು. ಆದರೆ, ಅದನ್ನು ಕೊಟ್ಟಿಲ್ಲ ಎಂಬ ಕಾರಣಕ್ಕೆ ಈ ರೀತಿ ಮರಕ್ಕೆ ಕಟ್ಟಿ, ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಅತ್ತೆಯ ಹಿಂಸೆಗೆ ಚೀರಾಡುತ್ತಿರುವ ಮಹಿಳೆ, ಹಗ್ಗದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಯುವತಿಯ ತಾಯಿಯ ಸಂಬಂಧಿಕರು ಓಡಿಬಂದು, ಆಕೆಯನ್ನು ಅತ್ತೆಯಿಂದ ರಕ್ಷಿಸಿ, ತದನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆಯ ಪತಿ, ಆತನ ಸಹೋದರ, ತಂದೆ ಮತ್ತು ತಾಯಿಯನ್ನು ವಿಚಾರಣೆಗೆ ಒಳಪಡಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).