

ಲೇಹ್: ಭಾರತೀಯ ಸೇನೆಯಲ್ಲಿ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಿರುವುದು ಈಗ ಹಳೆಯ ಮಾತು. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸೇನೆಯ ಎಲ್ಲಾ ವಿಭಾಗಗಳಲ್ಲಿಯೂ ಮಹಿಳೆಯರ ನೇಮಕಾತಿ ಹೆಚ್ಚಾಗಿದೆ. ಎಷ್ಟೋ ವಿಭಾಗಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಸ್ಥಾನ ಸಿಕ್ಕಿದೆ.
ಇದೀಗ ಗಡಿ ಭಾಗಗಳಲ್ಲಿಯೂ ಮಹಿಳೆಯರು ಸನ್ನದ್ಧರಾಗಿ ನಿಂತಿದ್ದಾರೆ. ಯುದ್ಧ ಎದುರಾದರೂ ಡೋಂಟ್ ಕೇರ್ ಎನ್ನುತ್ತಿರುವ ಈ ಮಹಿಳಾ ಪಡೆಗೆ ಲಡಾಖ್‌ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಕಾರ್ಯವೈಖರಿಯನ್ನು ಪ್ರಧಾನಿ ಕೊಂಡಾಡಿದರು.
ಲಡಾಖ್‌ಗೆ ಇಂದು ಭೇಟಿ ಕೊಟ್ಟ ಸಮಯದಲ್ಲಿ ಅಲ್ಲಿ ನೆರೆದಿದ್ದ ಮಹಿಳಾ ಯೋಧರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಭಾರತೀಯ ಸೇನೆಯಲ್ಲಿ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದು ತುಂಬಾ ಉತ್ತಮ ಬೆಳವಣಿಗೆ. ಗಡಿಯ ಯುದ್ಧಭೂಮಿಯಲ್ಲಿ ಮಹಿಳಾ ಸೈನಿಕರು ಹೋರಾಟಕ್ಕೆ ಸಜ್ಜಾಗಿ ನಿಂತಿರುವುದು ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.
"ನಾನು ನನ್ನ ಮುಂದೆ ಮಹಿಳಾ ಸೈನಿಕರನ್ನು ನೋಡುತ್ತಿದ್ದೇನೆ. ಗಡಿಯಲ್ಲಿನ ಯುದ್ಧಭೂಮಿಯಲ್ಲಿ, ಇಂಥ ನೋಟ ಅತ್ಯಂತ ಸ್ಫೂರ್ತಿದಾಯಕ. ನಿಮ್ಮ ಎದುರು ಮಾತನಾಡಲು ನನಗೆ ಹೆಮ್ಮೆ ಎನಿಸುತ್ತದೆ. ಇಂದು ನಾನು ನಿಮ್ಮ ಸಾಹಸವನ್ನು ಶ್ಲಾಘಿಸುತ್ತೇನೆ’ ಎಂದು ಹೇಳಿದರು.
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರೊಂದಿಗೆ ಪ್ರಧಾನಿ ಇಂದು ಲಡಾಖ್‌ಗೆ ಅಚ್ಚರಿಯ ಭೇಟಿ ನೀಡಿದ್ದು, ಚೀನಾದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಮಾತುಕತೆ ನಡೆಸಿದರು.
ನಿಮ್ಮೂನಲ್ಲಿ ಮಾತನಾಡಿದ ಪ್ರಧಾನಿ, ಭಾರತದ ಸೈನಿಕರನ್ನು ಶ್ಲಾಘಿಸುತ್ತಾ, ನಮ್ಮ ಸೇನೆ ಇಡೀ ವಿಶ್ವಕ್ಕೆ ಉತ್ತಮ ಸಂದೇಶವನ್ನು ರವಾನಿಸುತ್ತಿದೆ ಎಂದು ಹೇಳಿದರು.