ಮಹಿಳಾ ಮೀಸಲಲ್ಲಿ ಈ ಅಂಶ ಸೇರಿಸದಿದ್ದರೆ ಉದ್ದೇಶವೇ ವಿಫಲ; ಸಿದ್ದರಾಮಯ್ಯ

Siddaramaiah
Published on

ಬೆಂಗಳೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಸ್ವಾಗತಾರ್ಹ ನಿರ್ಧಾರವಾಗಿದ್ದರೂ ಹಿಂದುಳಿದ ಜಾತಿಯ ಮಹಿಳೆಯರಿಗೆ ಒಳಮೀಸಲಾತಿ ನೀಡದೆ ಇದ್ದರೆ ಈ ಸಮುದಾಯದ ಮಹಿಳೆಯರಿಗೆ ಅನ್ಯಾಯ ಮಾಡಿದಂತಾಗುವುದು ಮಾತ್ರವಲ್ಲ ಮೀಸಲಾತಿಯ ಉದ್ದೇಶವೇ ವಿಫಲವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಲಿಂಗ ಅಸಮಾನತೆಯ ಜತೆಯಲ್ಲಿ ಜಾತಿ ಅಸಮಾನತೆಯನ್ನೂ ಒಳಗೊಂಡಿರುವ ಭಾರತೀಯ ಸಮಾಜದಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿದ ಮಹಿಳೆಯರು ರಾಜಕೀಯವಾಗಿ ಉಳಿದವರ ಜತೆ ಪೈಪೋಟಿ ನಡೆಸಿ ಪ್ರಾತಿನಿಧ್ಯ ಪಡೆಯುವಂತಹ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಾಮರ್ಥ್ಯ ಇಲ್ಲದಿರುವುದನ್ನು ನಾವು ಗಮನಿಸಬೇಕಾಗಿದೆ ಎಂದಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಾಗಲೇ ರಾಜಕೀಯ ಮೀಸಲಾತಿ ಇರುವುದರಿಂದ ಆ ಸಮುದಾಯಗಳ ಮಹಿಳೆಯರಿಗೆ ಮೀಸಲಾತಿ ನೀಡುವುದು ಸಮಸ್ಯೆಯಾಗಲಾರದು. ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾಮೀಸಲಾತಿಯ ಮಸೂದೆಯನ್ನು ವಿವರವಾಗಿ ಪರಿಶೀಲಿಸಿದರೆ ಮಹಿಳೆಯರಿಗೆ ರಾಜಕೀಯ ನ್ಯಾಯಕೊಡಿಸುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಲಾಭ ಪಡೆಯುವ ಸ್ವಾರ್ಥವೇ ಕಾಣುತ್ತಿದೆ. ಈಗಿನ ಮಸೂದೆಯನ್ನು ಇದೇ ರೂಪದಲ್ಲಿ ಜಾರಿಗೆ ತರಲು ಹೊರಟರೆ ಮಹಿಳೆಯರು ರಾಜಕೀಯ ಮೀಸಲಾತಿ ಪಡೆಯಲು ಇನ್ನೆರಡು ದಶಕಗಳ ಕಾಲ ಕಾಯಬೇಕಾಗಬಹುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net