

ಬೀಜಿಂಗ್: ಆನ್ಲೈನ್ನಲ್ಲಿ ಚಂದ ಕಾಣುವ ಬಟ್ಟೆಯನ್ನು ಆರ್ಡರ್ ಮಾಡಿದರೆ ಹರಕು ಬಟ್ಟೆ ಮನೆಗೆ ಬರುವ ಎಷ್ಟೋ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಮಹಿಳೆಯ ಕಥೆಯೇ ಬೇರೆ. ಇತ್ತೀಚೆಗೆ ಬಿಡುಗಡೆಯಾಗಿರುವ 1.1 ಲಕ್ಷ ಮೌಲ್ಯದ ಐಫೋನ್ ಆರ್ಡರ್ ಮಾಡಿದ ಮಹಿಳೆಗೆ ಬಂದಿದ್ದು ಆ್ಯಪಲ್ ಜ್ಯೂಸ್!
ಚೀನಾದ ಲಿಯು ಈ ರೀತಿ ಮೋಸಕ್ಕೆ ಒಳಗಾದ ಮಹಿಳೆ. ಆ್ಯಪಲ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ಐಫೋನ್ 12 ಪ್ರೋ ಮ್ಯಾಕ್ಸ್ ಫೋನನ್ನು ನೋಡಿ ಅದನ್ನು ತೆಗೆದುಕೊಳ್ಳುವ ಮನಸ್ಸು ಆಕೆಗಾಗಿದೆ. ಆ ಹಿನ್ನೆಲೆಯಲ್ಲಿ ಆ್ಯಪಲ್ನ ಅಧಿಕೃತ ವೆಬ್ಸೈಟ್ನಲ್ಲಿ ಐಫೋನ್ 12 ಪ್ರೋ ಮ್ಯಾಕ್ಸ್ ಫೋನನ್ನು ಆರ್ಡರ್ ಮಾಡಿದ್ದಾಳೆ. ಅದಕ್ಕೆ 1500 ಡಾಲರ್ ಅಂದರೆ ಸರಿ ಸುಮಾರು 1.10 ಲಕ್ಷ ರೂಪಾಯಿ ಪಾವತಿಯನ್ನೂ ಮಾಡಿದ್ದಾಗಿದೆ.
ಫೋನ್ ಆರ್ಡರ್ ಮಾಡಿದ ನಂತರ ಆ ಫೋನಿನ ಬರುವಿಕೆಗಾಗಿ ಲಿಯು ಕಾದಿದ್ದಾಳೆ. ನಿಗದಿತ ದಿನದಂದು ಫೋನು ಆಕೆಯ ಮನೆಗೆ ಬಂದು ತಲುಪಿದೆ. ಆದರೆ ಫೋನಿರಬೇಕಿದ್ದ ಜಾಗದಲ್ಲಿ ಆ್ಯಪಲ್ ಜ್ಯೂಸ್ ಕಂಡಿದೆ. ದುಬಾರಿ ಬೆಲೆಯ ಫೋನಿನ ಬದಲಾಗಿ ಕನಿಷ್ಠ ಬೆಲೆಯ ಜ್ಯೂಸನ್ನು ಪಾರ್ಸೆಲ್ ಮಾಡಲಾಗಿದೆ.
ಈ ವಿಚಾರವನ್ನು ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ಆದರೆ ಆ್ಯಪಲ್ ಸಂಸ್ಥೆ ಮತ್ತು ಅದನ್ನು ಪಾರ್ಸೆಲ್ನಲ್ಲಿ ತಂದುಕೊಟ್ಟ ಎಕ್ಸ್ ಪ್ರೆಸ್ ಮೇಲ್ ಸಂಸ್ಥೆಯು ತಾವು ಫೋನನ್ನೇ ಪಾರ್ಸೆಲ್ ಕಳುಹಿಸಿದ್ದಾಗಿ ವಾದಿಸಿವೆ. ಮಹಿಳೆಯು ನೇರವಾಗಿ ಮನೆಗೆ ಆರ್ಡರ್ ಮಾಡದೆಯೇ ಪಾರ್ಸೆಲ್ ಲಾಕರ್ಗೆ ಆರ್ಡರ್ ಮಾಡಿದ್ದಳು ಎಂದು ತಿಳಿಸಲಾಗಿದೆ. ಈ ಕುರಿತಾಗಿ ಹೆಚ್ಚಿನ ವಿಚಾರಣೆ ನಡೆಸಲು ಎಕ್ಸ್ ಪ್ರೆಸ್ ಮೇಲ್ ಸಂಸ್ಥೆಯು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಿದೆ. (ಏಜೆನ್ಸೀಸ್)