

ತಿರುವನಂತಪುರಂ: ಮೂರು ತಿಂಗಳ ಹಿಂದೆಯಷ್ಟೇ ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗಿದ್ದ ಯುವತಿ (Newly Married), ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾದ ಶಾಕಿಂಗ್ ಘಟನೆ ಕೇರಳದ ಪಲೋಡ್‌ನ ಇಲವತ್ತಂನಲ್ಲಿ ವರದಿಯಾಗಿತ್ತು. ಮೃತರನ್ನು ಕೊಳಚ್ಚಲ್ ಕೊನ್ನಮೂಡು, ಇಡಿಂಜಾರು, ಪಾಲೋಡು ನಿವಾಸಿ ಇಂದುಜಾ (25) ಎಂದು ಗುರುತಿಸಲಾಗಿದ್ದು, ಶುಕ್ರವಾರ (ಡಿ.06) ಮಧ್ಯಾಹ್ನ ಆಕೆಯ ಪತಿ ಅಭಿಜಿತ್ ಊಟಕ್ಕೆ ಮನೆಗೆ ಬಂದಾಗ ಎರಡನೇ ಮಹಡಿಯ ಬೆಡ್ ರೂಮಿನಲ್ಲಿ ಆಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದಳು. ಇದನ್ನು ನೋಡಿ ಗಾಬರಿಗೊಂಡ ಪತಿ, ತಕ್ಷಣವೇ ಪೊಲೀಸರಿಗೆ ದೂರು ನೀಡಿ, ಆತಂಕ ಹೊರಹಾಕಿದ್ದ. ಆದರೆ, ತನಿಖೆಯಲ್ಲಿ ಗಂಡನ ಅಸಲಿ ಮುಖ ಕಳಚಿಬಿದ್ದಿದೆ.
ಎರಡು ವರ್ಷ ಪ್ರೀತಿಸಿ, ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ಜೋಡಿಗೆ ಅಡ್ಡಿಯಾಗಿದ್ದು ಜಾತಿ. ಈ ವಿಚಾರವಾಗಿ ಇಬ್ಬರಲ್ಲಿಯೂ ಯಾವ ತೊಂದರೆ ಇರಲಿಲ್ಲ ಎಂದು ಹೇಳಲಾದರೂ, ಹುಡುಗನ ಮನೆಯಲ್ಲಿ ಅವರ ಪೋಷಕರದ್ದು ವಿವಾದವಿತ್ತು. ಇದರ ನಡುವೆಯೇ ಅಭಿಜಿತ್ ಮತ್ತು ಇಂದುಜಾ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದರು. ಆದರೆ, ಯುವತಿಯ ದಿಢೀರ್ ಆತ್ಮಹತ್ಯೆಗೆ ಕಾರಣವೇನು? ಅದರ ಹಿಂದಿರುವ ಕೈವಾಡ ಯಾರದ್ದು? ಎಂಬುದು ಪೊಲೀಸರಲ್ಲಿ ತೀವ್ರ ಗೊಂದಲ ಮೂಡಿಸಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಖಾಕಿ ಪಡೆಗೆ ಯುವತಿಯ ಜತೆಗಿದ್ದ ಅಜ್ಜಿಯ ಮಾತುಗಳೇ ಸುಳಿವು ನೀಡಿದೆ.
ಸಾವಿಗೆ ಶರಣಾಗುವ ಮುನ್ನ ಆಕೆ ಯಾರೊಂದಿಗೋ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದಳು ಎಂದು ಹೇಳಿದ್ದನ್ನು ಟ್ರ್ಯಾಕ್ ಮಾಡಿದ ಪೊಲೀಸರು, ಪತಿ ಅಭಿಜತ್ನನ್ನು ಕರೆಸಿ, ವಿಚಾರಣೆ ನಡೆಸಿದ್ದಾರೆ. ಇಂದುಜಾ ಮಾತನಾಡಿದ ಕೊನೆಯ ಕರೆ ಪತಿ ಅಭಿಜಿತ್ನ ಸ್ನೇಹಿತ ಅಜಾಸ್ನದ್ದು ಎಂಬುದು ಪೊಲೀಸರಿಗೆ ಅನುಮಾನ ಹುಟ್ಟಿಸಿದೆ. ಮೃತ ಯುವತಿಯ ಪತಿಯನ್ನು ಕರೆಸಿ, ವಿಚಾರಣೆ ನಡೆಸಿದ ಪೊಲೀಸರಿಗೆ ಒಂದಷ್ಟು ವಿಷಯ ಸ್ಪಷ್ಟವಾಗಿದೆ. ಈ ಸಾವಿಗೆ ಅಭಿಜಿತ್ ಮತ್ತು ಆತನ ಸ್ನೇಹಿತ ಅಜಾಸ್ ಆಡಿರುವ ಮಾತುಗಳೇ ಕಾರಣ ಎನ್ನುವುದು ಪೊಲೀಸರು ತಮ್ಮ ತನಿಖೆಯಲ್ಲಿ ದಾಖಲಿಸಿಕೊಂಡಿದ್ದಾರೆ.
ನಾನು, ಇಂದುಜಾ ಮತ್ತು ಸ್ನೇಹಿತ ಅಜಾಸ್ ಕಾರಿನಲ್ಲಿ ಹೋಗುವಾಗ ನನ್ನ ಮುಂದೆಯೇ ಆತ ಇಂದುಜಾಗೆ ನೀನು ಅನ್ಯ ಜಾತಿಯವಳು ಎಂಬ ವಿಷಯವನ್ನು ಉಲ್ಲೇಖಿಸಿ, ಮಾನಸಿಕವಾಗಿ ಕಿರುಕುಳ ನೀಡಿದ್ದ ಎಂದು ಅಭಿಜಿತ್ ಪೊಲೀಸರ ಮುಂದೆ ನಡೆದ ಘಟನೆ ವಿವರಿಸಿದ್ದಾನೆ. ಅಜಾಸ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳುವ ಮೊದಲು ಇಬ್ಬರೂ ಗೆಳೆಯರು ತಮ್ಮ ಫೋನ್ ದಾಖಲೆಗಳು ಮತ್ತು ವಾಟ್ಸಾಪ್ ಚಾಟ್ ಹಿಸ್ಟರಿಯನ್ನು ಅಳಿಸಿ ಹಾಕಿರುವುದು ಪೊಲೀಸರ ಸಂದೇಹವನ್ನು ಹೆಚ್ಚು ಮಾಡಿದೆ. ಪ್ರಸ್ತುತ ಅಭಿಜಿತ್ ಮತ್ತು ಆತನ ಸ್ನೇಹಿತ ಆಜಾಸ್ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಮಗಳನ್ನು ಕಳೆದುಕೊಂಡು ಪರಿತಪ್ಪಿಸುತ್ತಿರುವ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ,(ಏಜೆನ್ಸೀಸ್).