

Micro Finance: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕೇವಲ ಒಂದು ಜಿಲ್ಲೆಗೆ ಸೀಮಿತವಾಗದ ಸಮಸ್ಯೆ ಇದೀಗ ರಾಜ್ಯವ್ಯಾಪಿ ಆವರಿಸಿಕೊಂಡಿದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಇಂತಹ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದ್ದು, ಸಂಸ್ಥೆಯ ಚಿತ್ರಹಿಂಸೆಗೆ ಅನೇಕರು ಊರು ಬಿಟ್ಟು, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೀಗ ಮತ್ತೊಬ್ಬರು ಮೈಕ್ರೋ ಫೈನಾನ್ಸ್ ಸಂಸ್ಥೆಯ ಕಿರುಕುಳಕ್ಕೆ ಬೇಸತ್ತು ಸಾವಿಗೆ ತುತ್ತಾಗಿದ್ದಾರೆ.
ಮಂಡ್ಯದ ಮಳವಳ್ಳಿಯ ಕೊನ್ನಾಪುರ ಗ್ರಾಮದ ಪ್ರೇಮಾ (59) ಎಂಬ ಮಹಿಳೆ, ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ನಿರಂತರ ಕಿರುಕುಳಕ್ಕೆ ಮನನೊಂದು ಸಾವಿಗೀಡಾಗಿದ್ದಾರೆ. ನಿನ್ನೆ (ಜ.29) ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿ, ಮಾತ್ರೆ ನುಂಗಿದ ಪ್ರೇಮಾಳನ್ನು ಕುಟುಂಬಸ್ಥರು ತಕ್ಷಣವೇ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಸಾವನ್ನಪ್ಪಿರುವುದು ಸದ್ಯ ಕುಟುಂಬಸ್ಥರ ಕಣ್ಣೀರಿಗೆ ಕಾರಣವಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಚನ್ನಪಟ್ಟಣದ ಉಜ್ಜೀವನ್ ಬ್ಯಾಂಕ್ನಲ್ಲಿ ಪ್ರೇಮಾ ಆರು ಲಕ್ಷ ಸಾಲ ಪಡೆದಿದ್ದರು. ಈಗಾಗಲೇ ಆರು ಲಕ್ಷ ಸಾಲವನ್ನೂ ತೀರಿಸಿದ್ದರು. ಆದರೆ, ಕೆಲವು ಕಂತು ಕಟ್ಟದ ಹಿನ್ನೆಲೆ ಸಿಬ್ಬಂದಿಗಳು ವಾರದ ಹಿಂದೆ ಆಕೆ ವಾಸವಿದ್ದ ಮನೆಯನ್ನು ಸೀಜ್ ಮಾಡಿದ್ದರು. ಕಳೆದ ಒಂದು ವಾರದಿಂದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಪ್ರೇಮಾ, ತೀರ ಮನನೊಂದು ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದೇ ಆದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರಕರಣ ಹಲಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.