ಐ ಲವ್​ ಯೂ, ನಿನ್ನ ಪತಿ...! ಗಂಡ, ಮತ್ತೊಬ್ಬನ ಕಿರುಕುಳಕ್ಕೆ ಬೇಸತ್ತ ಯುವತಿ ಆತ್ಮಹತ್ಯೆಗೆ ಶರಣು | Suicide Case

ವಿಜಯವಾಣಿ - 2025-07-03T213204.782
Published on

Suicide Case: ಒಂದೆಡೆ ಗಂಡನಿಂದ ಕಿರುಕುಳ, ಮತ್ತೊಂದೆಡೆ ಗೊತ್ತಿಲ್ಲದ ಯುವಕನಿಂದ ಹಿಂಸೆ. ಇಬ್ಬರ ಕಿರುಕುಳದಿಂದ ತೀರ ಮನನೊಂದ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಜಂಗಾಂವ್​ನಲ್ಲಿ ವರದಿಯಾಗಿದೆ.

ನಕಲಿ ಹೆಸರಿನಲ್ಲಿ ಆಗಾಗ್ಗೆ ಫೋನ್‌ ಮಾಡಿ, ಐ ಲವ್​ ಯೂ ಎನ್ನುತ್ತಿದ್ದ ಪಾಗಲ್​ ಪ್ರೇಮಿಯ ಹುಚ್ಚಾಟಕ್ಕೆ ಮೊದಲೇ ರೋಸಿ ಹೋಗಿದ್ದ ಯುವತಿ, ಗಂಡ ನಡೆದುಕೊಂಡ ಪರಿಗೆ ಬೇಸತ್ತು ದುರಂತ ಅಂತ್ಯ ಕಂಡಿದ್ದಾಳೆ. ಈ ದುರ್ಘಟನೆ ಬುಧವಾರ (ಜು.02) ಮಹಾಬೂಬಾಬಾದ್ ಜಿಲ್ಲೆಯ ಗಾರ್ಲಾ ಮಂಡಲದ ಮುಲ್ಕನೂರ್‌ನಲ್ಲಿ ಸಂಭವಿಸಿದೆ.

ಪೊಲೀಸರ ಪ್ರಕಾರ, ಖಮ್ಮಂ ಜಿಲ್ಲೆಯ ತಿರುಮಲಯಪಾಲಂ ಮಂಡಲದ ಪಿಂಡಿಪ್ರೊಲು ಗ್ರಾಮದ ನಿವಾಸಿ ಶೈಲಜಾ (24) ಮೃತ ದುರ್ದೈವಿ. 8 ವರ್ಷಗಳ ಹಿಂದೆ ಗ್ರಾಮದ ನಿವಾಸಿ ಎಡುಲಾ ಸತೀಶ್‌ಕುಮಾರ್ ಎಂಬಾತನನ್ನು ವಿವಾಹವಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಸಂದರ್ಭದಲ್ಲಿ, ಕಳೆದ 3 ವರ್ಷಗಳಿಂದ, ಪಿಂಡಿಪ್ರೊಲು ಗ್ರಾಮದ ಯುವಕ ಕಂಪತಿ ಶ್ರೀರಾಮ್ ಎಂಬಾತ ಆಗಾಗ್ಗೆ ಶೈಲಜಾಗೆ ಕರೆ ಮಾಡಿ ಅಡ್ಡಹೆಸರಿನಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

"ನಾನು ನಿನ್ನನ್ನು ಲವ್ ಮಾಡ್ತೀನಿ. ನಾವಿಬ್ಬರೂ ಒಟ್ಟಿಗೆ ಬಾಳೋಣ. ನಿನ್ನ ಮಕ್ಕಳು ಮತ್ತು ಪತಿಯನ್ನು ಬಿಟ್ಟುಬಿಡು" ಎಂದೆಲ್ಲ ಹೇಳಿ, ಶೈಲಜಾಗೆ ಕಿರುಕುಳ ನೀಡುತ್ತಿದ್ದ. ಈ ವಿಷಯವನ್ನು ಕೂಲಂಕುಷವಾಗಿ ಆಲಿಸದ ಆಕೆಯ ಪತಿ ಸತೀಶ್ ಕುಮಾರ್, ಎರಡು ವರ್ಷಗಳ ಬಳಿಕ ಈ ವಿಚಾರವನ್ನು ತಿಳಿದುಕೊಂಡಿದ್ದಾನೆ. ಪತ್ನಿಯನ್ನು ಏನಾಯಿತು ಎಂದು ಪ್ರಶ್ನಿಸದ ಸತೀಶ್​, ಆಕೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆಗಾಗ್ಗೆ ಕಿರುಕುಳ ನೀಡಿದ್ದಾನೆ. ನಿಮ್ಮಿಬ್ಬರ ನಡುವೆ ಎಷ್ಟು ದಿನಗಳಿಂದ ಈ ವಿವಾಹೇತರ ಸಂಬಂಧವಿದೆ? ಏಕೆ ಬದುಕಿದ್ಯಾ ಎಂದು ಮಾನಸಿಕವಾಗಿ ಹಿಂಸಿಸಿದ್ದಾನೆ.

ಪತಿ ಸತೀಶ್ ಕುಮಾರ್ ಮತ್ತು ಯುವಕ ಶ್ರೀರಾಮ್ ಕಿರುಕುಳ ಸಹಿಸಲಾಗದೆ ಶೈಲಜಾ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಇಲಿ ಪಾಷಾಣ ಸೇವಿಸಿದ್ದಾಳೆ. ಯುವತಿಯ ಪತಿ ಸತೀಶ್ ಕುಮಾರ್ ಆಕೆಯನ್ನು ಗಮನಿಸಿ ಚಿಕಿತ್ಸೆಗಾಗಿ ಮಹಬೂಬಾಬಾದ್‌ನ ಖಾಸಗಿ ಆಸ್ಪತ್ರೆಗೆ ಕೂಡಲೇ ಕರೆದೊಯ್ದಿದ್ದಾನೆ. ಆದ್ರೆ, ಅಷ್ಟರೊಳಗೆ ಶೈಲಜಾ ಮೃತಪಟ್ಟಿರುವುದು ದೃಢವಾಗಿದೆ. ಮೃತ ಶೈಲಜಾ ತಾಯಿ ಕವಿತಾ ನೀಡಿದ ದೂರಿನ ಆಧಾರದ ಮೇರೆಗೆ ಯುವತಿಯ ಪತಿ ಸತೀಶ್ ಕುಮಾರ್ ಮತ್ತು ಯುವಕ ಶ್ರೀರಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್‌ಐ ರಿಯಾಜ್‌ ಪಾಷಾ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net