

ಆಲೂರು: ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ದೊಡ್ಡದು. ಎಲ್ಲ ಸ್ತರಗಳಲ್ಲೂ ಕೆಲಸ ಮಾಡುತ್ತಿರುವ ಹೆಣ್ಣು ಅಬಲೆಯಾಗಿ ಉಳಿದಿಲ್ಲ ಎಂದು ಚಿಕ್ಕಮಗಳೂರು ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ (ಸಿಎಂಎಸ್‌ಎಸ್‌ಎಸ್) ನಿಯೋಜಿತ ನಿರ್ದೇಶಕ ಫಾದರ್ ಆಲ್ಡಿನ್ ಡಿಸೋಜಾ ಹೇಳಿದರು.
ತಾಲೂಕಿನ ಮಗ್ಗೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಸಮುದಾಯ ಭವನದಲ್ಲಿ ಸಿಎಂಎಸ್‌ಎಸ್‌ಎಸ್ ಸಂಸ್ಥೆ, ಅಮರ ಜ್ಯೋತಿ ಮಹಾಸಂಘ ಮತ್ತು ಸ್ನೇಹಾಜ್ಯೋತಿ ಮಹಾಸಂಘಗಳ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಿ, ಪತ್ನಿ, ಸಹೋದರಿ ಸೇರಿದಂತೆ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಮಹಿಳೆಗೆ ನಮ್ಮ ವಿಶೇಷ ಸ್ಥಾನವಿದೆ. ಆಕೆಯ ತ್ಯಾಗ ಮತ್ತು ಹೋರಾಟದ ಮನೋಭಾವ ಎಲ್ಲರಿಗೂ ಮಾದರಿಯಾದುದು ಎಂದು ಹೇಳಿದರು.
ಫಾದರ್ ರಾಜೇಂದ್ರ ಮಾತನಾಡಿ, ಹೆಣ್ಣು ಸಮಾಜದ ಕಣ್ಣಾಗುವ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ್ದಾರೆ. ಎಲ್ಲ ರಂಗಗಳಲ್ಲೂ ಮಹಿಳೆಯರಿಂದು ಭಾಗವಹಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದರು.
ಸಿಎಂಎಸ್‌ಎಸ್‌ಎಸ್ ಪಿಆರ್‌ಒ ನಿರೀಕ್ಷಾ ಮಾತನಾಡಿ, ಮಹಿಳೆಯರು ಸಾಮಾಜಿಕ ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಶಕ್ತರಾಗಬೇಕೆಂಬ ಉದ್ದೇಶದಿಂದ ಸಂಸ್ಥೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳಾದ ಮಹಿಳಾ ಸಬಲೀಕರಣ, ಅಂಗವಿಕಲರನ್ನು ಮುಖ್ಯವಾಹಿನಿಗೆ ತರುವುದು, ಆರೋಗ್ಯ ಮತ್ತು ಶಿಕ್ಷಣ, ಕೌಶಲ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗಳಿಗೆ ಸಂಬಂಧಿಸದಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಪ್ರತಿಯೊಬ್ಬ ಮಹಿಳೆಯು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಲಕ್ಷ್ಮೀ, ಅಶ್ವಿನಿ, ರೂಪಾ, ಪಾಲಾಕ್ಷ, ನಸ್ತೀನ್ ಅಕ್ತರ್, ಸಿಸ್ಟರ್ ಮೇರಿ ಜೆರಾಲ್ಡಿನ್, ಪರಮೇಶ್, ಜೀವನ್ ಜೋಯಲ್, ಜಯಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.