

ವಾಷಿಂಗ್ಟನ್: ಪ್ರೀತಿಗೆ ಸಾವಿಲ್ಲ ಎನ್ನುತ್ತಾರೆ. ಕೆಲವೊಮ್ಮೆ ಪ್ರೀತಿಸಿದ ವ್ಯಕ್ತಿ ಕೊಟ್ಟ ವಸ್ತುಗಳೂ ಸಹ ಹಾಗೆಯೇ, ಎಂದೂ ನಮ್ಮನ್ನ ಬಿಟ್ಟೋಗುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಅಮೆರಿಕದ ಮಹಿಳೆಯೊಬ್ಬಳಿಗೆ ಆಕೆಯ ಹೈಸ್ಕೂಲ್ ದಿನಗಳಲ್ಲಿ ತನ್ನ ಪ್ರಿಯತಮ ನೀಡಿದ್ದ ಉಂಗುರ 47 ವರ್ಷಗಳ ನಂತರ ಅವಳನ್ನೇ ಹುಡುಕಿಕೊಂಡು ಬಂದಿದೆ. 47 ವರ್ಷಗಳ ಹಿಂದೆ ಶಾಲೆಯಲ್ಲಿ ಕಳೆದಿದ್ದ ಉಂಗುರವು ಈ ವರ್ಷ ಕಾಡೊಂದರಲ್ಲಿ ಯಾವುದೋ ಅಪರಿಚಿತನಿಗೆ ಸಿಕ್ಕಿದ್ದು ಅದು ಆಕೆಯ ಕೈ ಸೇರಿರುವುದು ವಿಶೇಷ.
ಡೆಬ್ರಾ ಮೆಕೆನ್ ಹೆಸರಿನ 63 ವರ್ಷದ ವೃದ್ಧೆ ತನ್ನ ಹೈಸ್ಕೂಲ್ ದಿನಗಳಲ್ಲಿ ಶಾನ್ ಹೆಸರಿನ ವ್ಯಕ್ತಿಯನ್ನು ಪ್ರೀತಿಸಿದ್ದಳಂತೆ. ಆತ ಸ್ಕೂಲ್ ಬಿಟ್ಟು ಕಾಲೇಜು ಸೇರುವಾಗ ತನ್ನ ನೆನೆಪಿಗೆಂದು ಆಕೆಗೆ ಉಂಗುರವೊಂದನ್ನು ಕೊಟ್ಟಿದ್ದ. ಪ್ರಿಯತಮನ ಪ್ರೀತಿಯ ನೆನಪಿನ ಆ ಉಂಗುರವನ್ನು ಆಕೆ ಶಾಲೆಯ ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ಕಳೆದುಕೊಂಡಿದ್ದಳಂತೆ. ಅದಾದ ನಂತರ ಉಂಗುರವನ್ನು ಮರೆತ ಆಕೆ ಶಾನ್ನನ್ನು ಮದುವೆಯಾಗಿ 40 ವರ್ಷಗಳ ಸುಖ ದಾಂಪತ್ಯವನ್ನು ನಡೆಸಿದ್ದಾಳೆ. 2017ರಲ್ಲಿ ಪತಿ ಸತ್ತಿದ್ದು ಒಬ್ಬಂಟಿ ಜೀವನವನ್ನು ನಡೆಸಲು ಆರಂಭಿಸಿದ್ದಾಳೆ.
ಇತ್ತೀಚೆಗೆ ಫಿನ್ನಿಶ್ ಪಾರ್ಕ್ನ ಕಾಡಿನಲ್ಲಿ ಮೆಟಲ್ ಡಿಟೆಕ್ಟರ್ನೊಂದಿಗೆ ಕೆಲಸ ಮಾಡುತ್ತಿದ್ದ ಕೆಲಸಗಾರನೊಬ್ಬನಿಗೆ ಮೆಟಲ್ ಡಿಟೆಕ್ಟರ್ ಸೌಂಡ್ ಮಾಡಿ ಎಚ್ಚರಿಸಿದೆ. ಏನಿರಬಹುದು ಎನ್ನುವ ಕುತೂಹಲದಿಂದ ಭೂಮಿಯನ್ನು ಅಗೆದ ಆತನಿಗೆ ಉಂಗುರ ಸಿಕ್ಕಿದೆ. ಉಂಗುರದ ಮೇಲೆ ಮೋರ್ಸ್ ಹೈ ಸ್ಕೂಲ್ ಎಂದು ಬರೆದಿದ್ದು, ಆತ ಆ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಭೇಟಿ ಮಾಡಿ ಉಂಗುರವನ್ನು ಹಸ್ತಾಂತರಿಸಿದ್ದಾನೆ. ಉಂಗುರದಲ್ಲಿ ಅವರ ವಿದ್ಯಾಭ್ಯಾಸ ಮುಗಿದ ವರ್ಷ ಮತ್ತು 'S M' ಎಂದು ಬರೆದಿದ್ದ ಕಾರಣದಿಂದಾಗಿ ಆ ಉಂಗುರ ಡೆಬ್ರಾ ಮೆಕೆನ್ದೇ ಎಂದು ಪತ್ತೆ ಹಚ್ಚಿದ ಹಳೆಯ ವಿದ್ಯಾರ್ಥಿಗಳ ಸಂಘವು ಆಕೆಯ ಮನೆಗೆ ಉಂಗುರವನ್ನು ಕಳುಹಿಸಿಕೊಟ್ಟಿದೆ.
47 ವರ್ಷದ ಹಿಂದೆ ಪ್ರೀತಿಯ ಸಂಕೇತವಾಗಿ ಪ್ರಿಯತಮ ಕೊಟ್ಟಿದ್ದ ಉಂಗುರ ಕೈ ಸೇರುತ್ತಿದ್ದಂತೆ ಮೆಕೆನ್ಳ ಕಣ್ಣಲ್ಲಿ ಆನಂದಭಾಷ್ಪ ಹರಿದಿದೆ. (ಏಜೆನ್ಸೀಸ್)