

ಜೈಪುರ: ( Missing News ) 2 ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಮನೆಯೊಂದರ ಹಿತ್ತಲಿನಲ್ಲಿ 6 ತುಂಡುಗಳಾಗಿ ಪತ್ತೆಯಾಗಿದೆ. ಈ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಅನಿತಾ ಚೌಧರಿ (50) ಎಂದು ಗುರುತಿಸಲಾಗಿದೆ. ಅನಿತಾ ಚೌಧರಿ ಶವವನ್ನು ಜೋಧಪುರದ ಏಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಅನಿತಾ ಜೋಧ್‌ಪುರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಅನಿತಾ ಚೌಧರಿ ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದರು.
ನಡೆದಿದ್ದೇನು?: ಅನಿತಾ ಭಾನುವಾರ ಮಧ್ಯಾಹ್ನ 2:30ರ ಸುಮಾರಿಗೆ ಪಾರ್ಲರ್ಗೆ ಬಂದವಳು ಮನೆಗೆ ವಾಪಸ್ ಬಂದಿರಲಿಲ್ಲ. ಆಕೆಯ ಪತಿ ಮನಮೋಹನ್ ಚೌಧರಿ ಪತ್ನಿ ಕಾಣೆಯಾಗಿರುವ ಕುರಿತಾಗಿ ದೂರು ದಾಖಲಿಸಿದ್ದರು. ಈ ಬೆನ್ನಲ್ಲೇ ಆಕೆಯ ಕುಟುಂಬದ ಹಳೆಯ ಸ್ನೇಹಿತನೊಬ್ಬ ಕೊಂದಿರುವ ಶಂಕೆ ವ್ಯಕ್ತವಾಗಿತ್ತು.
ಅನಿತಾ ಚೌಧರಿ ನಾಪತ್ತೆ ಕೇಸ್ ದಾಖಲಿಸಿಕೊಂಡ ಪೊಲೀಸರಿಗೆ ಗುಲ್ ಮೊಹಮ್ಮದ್ ಎಂಬಾತನ ಮೇಲೆ ಅನುಮಾನ ಬಂದಿದೆ. ಈ ಅನುಮಾನ ನಿಜವಾಗಿದ್ದು, ಆರೋಪಿ ಮೊಹಮ್ಮದ್ 50 ವರ್ಷದ ಮಹಿಳೆಯ ಹತ್ಯೆಗೈದು 6 ತುಂಡುಗಳಾಗಿ ಕತ್ತರಿಸಿ ಹೂತಿದ್ದು ಮೃತದೇಹವನ್ನು ಹೊರ ತೆಗೆಯಲಾಗಿದೆ.
ಮಹಿಳೆಯ ನಾಪತ್ತೆ ಕೇಸ್ ತನಿಖೆ ನಡೆಸಿದ ಪೊಲೀಸರಿಗೆ ಅನಿತಾ ಚೌಧರಿಯ ಮೊಬೈಲ್ ನೆಟ್‌ವರ್ಕ್ ಕೊನೆಯ ಬಾರಿ ಗುಲ್ ಮೊಹಮ್ಮದ್ ಮನೆಯಲ್ಲೇ ಇದ್ದ ಮಾಹಿತಿ ಸಿಕ್ಕಿದೆ. ಕೂಡಲೇ ಆತನ ಮನೆಗೆ ಹೋಗಿ ಪರಿಶೀಲಿಸಿದಾಗ ಮೊಹಮ್ಮದ್ ನಾಪತ್ತೆ ಆಗಿದ್ದ. ಅನುಮಾನ ಮತ್ತಷ್ಟು ಹೆಚ್ಚಾಗಿ ಆತನ ಪತ್ನಿಯನ್ನು ವಿಚಾರಣೆ ನಡೆಸಿದಾಗ ಮನೆ ಹಿತ್ತಲಲ್ಲಿ ಶವ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ.
ಅನಿತಾ ಚೌಧರಿ ಅವರು ಮೊಹಮ್ಮದ್‌ನನ್ನು ತನ್ನ ಸೋದರ ಎಂದೇ ನಂಬಿದ್ದರು. ಸೋದರನಂತೆ ಇದ್ದ ಮೊಹಮ್ಮದ್‌ನಿಂದಲೇ ಈಗ ಅನಿತಾ ಚೌಧರಿ ಕೊ*ಲೆಯಾಗಿದೆ ಎನ್ನಲಾಗಿದೆ. ಸದ್ಯ ಮೊಹಮ್ಮದ್ ಎಂಬಾತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.