3 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಕಸವೆಂದು ಎಸೆದ ಮಹಿಳೆ; ಹಬ್ಬ ಬಂದ್ರೆ ಹೀಗೆಲ್ಲಾ ಆಗತ್ತೆ

gold
Published on

ಮುಂಬೈ: ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಹಿಳೆಯರೆಲ್ಲ ತಮ್ಮ ಮನೆ ಸ್ವಚ್ಛಗೊಳಿಸಿ ಹಬ್ಬಕ್ಕೆ ಸಿದ್ಧರಾಗುತ್ತಿದ್ದಾರೆ. ಮಹಾರಾಷ್ಟ್ರದ ಮಹಿಳೆಯೊಬ್ಬಳು ಈ ಹಬ್ಬದ ಸಮಯದಲ್ಲಿ ಬಂಗಾರವನ್ನೇ ಕಸವೆಂದು ಎಸೆದಿದ್ದಾಳೆ. ಅದೃಷ್ಟವಶಾತ್​ ಆಕೆ ಎಸೆದ ಬಂಗಾರ ಆಕೆಯನ್ನು ಮತ್ತೆ ಹುಡುಕಿಕೊಂಡು ಬಂದಿದೆ.

45 ವರ್ಷದ ಮಹಿಳೆ ಮನೆ ಸ್ವಚ್ಛ ಮಾಡುವಾಗ ಮನೆಯಲ್ಲಿದ್ದ ಹಳೆಯ ಪರ್ಸ್​ ಒಂದನ್ನು ಕಸದ ಜತೆ ಸೇರಿಸಿ ಎಸೆದಿದ್ದಾರೆ. ಅದನ್ನು ನಗರ ಪಾಲಿಕೆಯ ಪೌರ ಕಾರ್ಮಿಕರು ತೆಗೆದುಕೊಂಡು ಹೋಗಿ ಕಸದ ರಾಶಿಗೆ ಸುರಿದಿದ್ದಾರೆ. ಕಸ ಎಸೆದು ಗಂಟೆಗಳು ಉರುಳಿದ ನಂತರ ಮಹಿಳೆಗೆ ವಿಚಾರವೊಂದು ಹೊಳೆದಿದೆ. ಮನೆಗೆ ಬರುವ ಸೊಸೆಗೆಂದು ಮಾಡಿಸಿಟ್ಟಿದ್ದ ಮೂರು ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣವನ್ನು ತಾನು ಆ ಪರ್ಸ್​ನಲ್ಲಿ ಇಟ್ಟಿದ್ದು ತಡವಾಗಿ ಅರಿವಿಗೆ ಬಂದಿದೆ. ಕೂಡಲೇ ಆಕೆ ತನ್ನ ಮಗನಿಗೆ ವಿಷಯ ಮುಟ್ಟಿಸಿದ್ದಾಳೆ.

ನಡೆದ ವಿಚಾರವನ್ನು ನಗರ ಪಾಲಿಕೆಯ ಅಧಿಕಾರಿಗಳಿಗೆ ಮಗ ತಿಳಿಸಿದ್ದಾನೆ. ಪೌರ ಕಾರ್ಮಿಕ ಹೇಮಂತ್​ನೊಂದಿಗೆ ಬಂಗಾರ ಹುಡುಕಲು ಕಸ ಹಾಕಿದ್ದ ಸ್ಥಳಕ್ಕೆ ಅಮ್ಮ ಮಗ ತೆರಳಿದ್ದಾರೆ. ಅಲ್ಲಿ ಸುಮಾರು 18 ಟನ್​ ತ್ಯಾಜ್ಯ ಒಟ್ಟಾಗಿತ್ತು. ಆದರೆ ಹೇಮಂತ್​ ಅವರ ಚಾಣಾಕ್ಷತನದಿಂದ ಪರ್ಸ್​ ಅನ್ನು ಹುಡುಕಲಾಗಿದೆ.

ಈ ಹಿಂದೆ 2013ರಲ್ಲಿಯೂ ಇಂತದ್ದೇ ಒಂದು ಘಟನೆ ನಡೆದಿತ್ತು. ಆಗಲೂ ಕೂಡ ಹೇಮಂತ್​ ಅವರೇ ಬಂಗಾರವನ್ನು ಹುಡುಕಿಕೊಟ್ಟಿದ್ದರಂತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net