ಅಪ್ಪ ಅಮ್ಮನ ಮೃತದೇಹದೊಂದಿಗೇ ಬದುಕಿದ ಮಗಳು! ಕಣ್ಣೀರು ತರಿಸುತ್ತೆ ಈ ಕಥೆ

ಮೊತೆಹರ
Published on

ಕೋಲ್ಕತ: ಅಪ್ಪ ಅಮ್ಮ ಅಂದರೆ ಪ್ರಪಂಚವೆಂದು ನಂಬಿ ಬದುಕುವ ಮಕ್ಕಳಿದ್ದಾರೆ. ಪ್ರಪಂಚವಾಗಿರುವ ಅಪ್ಪ ಅಮ್ಮ ಅಚಾನಕ್ಕಾಗಿ ಮೃತರಾದರೆ? ಅದೆಷ್ಟೋ ಮಕ್ಕಳಿಗೆ ಇಂತಹ ವಿಚಾರವನ್ನು ಸಹಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಅದೇ ರೀತಿ ತನ್ನ ತಂದೆ ತಾಯಿಯ ಸಾವನ್ನು ಒಪ್ಪದ ಮಗಳೊಬ್ಬಳು ಅವರ ಮೃತ ದೇಹದೊಂದಿಗೇ ಬದುಕಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ವೈದ್ಯ ದಂಪತಿಯಾಗಿದ್ದ ಎ.ಕೆ.ಚೌಧರಿ ಮತ್ತು ಎಸ್​ ಚೌಧರಿ, ವಿಚ್ಛೇದನ ಪಡೆದಿದ್ದ ತಮ್ಮ ಮಗಳ ಜತೆ ಬದುಕುತ್ತಿದ್ದರು. 70 ವರ್ಷದ ಆಸುಪಾಸಿನಲ್ಲಿದ್ದ ದಂಪತಿ ಇತ್ತೀಚೆಗೆ ಮೃತರಾಗಿದ್ದಾರೆ. ಆದರೆ ಈ ವಿಚಾರವನ್ನು ಮಗಳು ಯಾರ ಬಳಿಯೂ ಹೇಳಿಲ್ಲ. ತಂದೆ ತಾಯಿಯ ಮೃತ ದೇಹವನ್ನು ಅಂತ್ಯಕ್ರಿಯೆಯೂ ಮಾಡಿಲ್ಲ. ಮೃತ ದೇಹವನ್ನು ಹಾಸಿಗೆ ಮೇಲೆ ಮಲಗಿಸಿ ಅದರೊಂದಿಗೆ ಜೀವನ ಕಳೆಯಲು ಆರಂಭಿಸಿದ್ದಾಳೆ.

ದಂಪತಿ ಮೃತರಾಗಿ ಒಂದೆರೆಡು ದಿನಕ್ಕೆ ಅವರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದೆ. ಈ ವಿಚಾರವಾಗಿ ಅಕ್ಕ ಪಕ್ಕದ ಮನೆಯವರು ಚರ್ಚೆ ನಡೆಸಿ, ಅವರ ಸಂಬಂಧಿಯೊಬ್ಬರನ್ನು ಸಂಪರ್ಕಿಸಿದ್ದಾರೆ. ಅದಾದ ನಂತರ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದ್ದು, ಅವರು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತ ದೇಹಗಳು ಕಂಡುಬಂದಿದ್ದು, ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ದಂಪತಿಯ ಮಗಳು ಮಾನಸಿಕ ತೊಂದರೆಯಿಂದ ಬಳಲುತ್ತಿರುವುದಾಗಿ ತಿಳಿಸಲಾಗಿದೆ. ವೈದ್ಯ ದಂಪತಿ ಸಾವಿಗೆ ಕಾರಣವೇನು ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net