

ಮುಂಬೈ: ಅಕ್ಕ ಪಕ್ಕದ ಮನೆಯವರ ಬಗ್ಗೆ ಏನನ್ನೇ ಮಾತನಾಡಬೇಕಿದ್ದರೂ ಹತ್ತು ಸಲ ಯೋಚಿಸಿ ಮಾತನಾಡಬೇಕು ಎನ್ನುತ್ತಾರೆ. ಅದರಲ್ಲೂ ಅವರ ಬಗ್ಗೆ ಏನಾದರೂ ತಪ್ಪು ಮಾತನಾಡಬೇಕಿದ್ದರಂತೂ ತೀರಾ ಹುಷಾರಾಗಿರಬೇಕು. ಸುಖಾ ಸುಮ್ಮನೆ ನೆರೆ ಮನೆಯವರ ಸುದ್ದಿಗೆ ಹೋದರೆ ಆಮೇಲೆ ಯಾವ ರೀತಿಯಲ್ಲಿ ಪಶ್ಚಾತಾಪ ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.
ಮುಂಬೈನ ಶಾಸಗಿ ಸಂಸ್ಥೆಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬಳು ಕಳೆದ ವರ್ಷ ಡಿಸೆಂಬರ್ನಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸ ಆರಂಭಿಸಿದ್ದಾಳೆ. ಬಾಬ್ ಕಟ್ ಮಾಡಿಸಿಕೊಂಡು, ಮಾಡರ್ನ್ ಬಟ್ಟೆ ತೊಡುತ್ತಿದ್ದ ಆಕೆ ತನ್ನ ಪಕ್ಕದ ಮನೆಯ ಮಹಿಳೆಗೆ ಪ್ರತಿದಿನ ಬೆಳಗ್ಗೆ ತಿಂಡಿ ಮಾಡಿಕೊಡಲು ಕೇಳಿದ್ದಳಂತೆ. ಅದಕ್ಕೆ ಇಷ್ಟು ಎಂದು ಹಣವನ್ನೂ ಕೊಡುತ್ತಿದ್ದಳಂತೆ. ಆದರೆ ಆ ತಿಂಡಿಯಲ್ಲಿ ರುಚಿ ಇಲ್ಲ ಎಂದೆನಿಸಿದ ನಂತರ ತಿಂಡಿ ಪಡೆಯುವುದನ್ನು ನಿಲ್ಲಿಸಿದ್ದಳಂತೆ. ಒಮ್ಮೆ ಪಕ್ಕದ ಮನೆ ಮಹಿಳೆ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆಕೆಯ ಮಗ ಮನೆಯಲ್ಲಿ ಪಾರ್ಟಿ ಇಟ್ಟುಕೊಂಡಿದ್ದನಂತೆ. ರಾತ್ರಿ 3 ಗಂಟೆಯಾದರೂ ಜೋರಾಗಿ ಸೌಂಡ್ ಹಾಕಿಕೊಂಡು ಪಾರ್ಟಿ ಮಾಡಲಾಗುತ್ತಿತ್ತಂತೆ. ಈ ಮಹಿಳೆ ಹೋಗಿ ಸೌಂಡ್ ಕಡಿಮೆ ಮಾಡಿಕೊಳ್ಳಿ ಎಂದು ಹೇಳಿಬಂದಿದ್ದಾಳೆ. ಆದರೂ ಅವರು ಆಕೆಯ ಮಾತನ್ನು ಕೇಳಿಲ್ಲ.
ಈ ಘಟನೆ ಆದ ಮೇಲೆ ಇಬ್ಬರು ಮಹಿಳೆಯರು ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಪಕ್ಕದ ಮನೆಯ ಮಹಿಳೆ ಈಕೆಯ ಬಗ್ಗೆ ಅಸಭ್ಯವಾಗಿ ಮಾತನಾಡಲಾರಂಭಿಸಿದ್ದಾಳೆ. ಆಕೆ ತುಂಬಾ ಕೆಟ್ಟದಾಗಿ ಬಟ್ಟೆ ತೊಡುತ್ತಾಳೆ. ಕೂದಲೆಲ್ಲ ಕಟ್ ಮಾಡಿಸಿಕೊಂಡಿದ್ದಾಳೆ. ಆ ಸೈಕೋ ಗಂಡೋ ಹೆಣ್ಣೋ ಎಂದೇ ಗೊತ್ತಾಗುವುದಿಲ್ಲ. ನಾಯಿಯ ತರ ಇದೆ ಅವಳ ವಾಯ್ಸ್ ಎಂದು ಆಕೆ ಹೇಳಿದ್ದಾಳೆ.
ಈ ಎಲ್ಲ ಮಾತಿನಿಂದಾಗಿ ನೊಂದ ಮಹಿಳೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ನನ್ನ ಮೇಲೆ ಮಾನಸಿಕವಾಗಿ ದೌರ್ಜನ್ಯವೆಸಗಲಾಗಿದೆ ಎಂದು ದೂರು ನೀಡಿದ್ದಾಳೆ. (ಏಜೆನ್ಸೀಸ್)