ಗಂಡನಿಗೆ ಸರ್ಕಾರಿ ಕೆಲಸ ಸಿಗುತ್ತೆ ಅಂತಾ ಕಿಡ್ನಿ ದಾನ ಮಾಡಿದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

Kidney Woman
Published on

ಚಂಡೀಗಢ: ಗಂಡನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ, ನನ್ನಿಂದ ಕಿಡ್ನಿ ದಾನ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಹರಿಯಾಣದ ಬಲ್ಲಭಗಢ ಮೂಲದ ಮಹಿಳೆಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.

ಎರಡು ವರ್ಷಗಳ ಹಿಂದೆ ಕಿಡ್ನಿ ಕಸಿಗೆ ಸಂಬಂಧಿಸಿದ ಜಾಹಿರಾತನ್ನು ಮಹಿಳೆ ನೋಡಿದ್ದಳು. ಬಳಿಕ ಜಾಹಿರಾತಿನಲ್ಲಿ ಪ್ರಕಟವಾಗಿದ್ದ ಮೊಬೈಲ್​ ನಂಬರ್​ಗೆ ಕರೆ ಮಾಡಿ, ತಾನು ಕಿಡ್ನಿ ದಾನ ಮಾಡುವುದಾಗಿ ಹೇಳಿದ್ದಳು. ನಂತರ ಮನಸ್ಸು ಬದಲಿಸಿ ಕಿಡ್ನಿ ದಾನ ಮಾಡುವುದರಿಂದ ಹಿಂಜರಿದಿದ್ದಳು. ಇದಾದ ಬಳಿಕ ಜಾಹಿರಾತು ನೀಡಿದವರು ಮಹಿಳೆಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾರೆ. ಕೊನೆಗೆ ಕಿಡ್ನಿ ದಾನ ಮಾಡಿದರೆ ಗಂಡನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದಾಗ, ಆ ಆಫರ್​ ಅನ್ನು ಮಹಿಳೆ ಒಪ್ಪಿಕೊಂಡು ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾಳೆ.

ಫರೀದಾಬಾದ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಪರೇಷನ್​ ನಡೆಯಿತು. ಇದಾದ ಬಳಿಕ ಸಾಕಷ್ಟು ತಿಂಗಳು ಕಳೆದರು ಗಂಡನಿಗೆ ಮಾತ್ರ ಸರ್ಕಾರಿ ಕೆಲಸ ಸಿಗಲಿಲ್ಲ. ಕರೆ ಮಾಡಿ ವಿಚಾರಿಸಿದರೆ ಭರವಸೆ ನೀಡಿದವರಿಂದ ಸರಿಯಾದ ಉತ್ತರ ಸಿಗುತ್ತಿರಲಿಲ್ಲ. ಇದರಿಂದ ಆಕ್ರೋಶಗೊಂಡಿರುವ ಮಹಿಳೆ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದ ಹಿಂದೆ ಅಂಗಾಂಗ ಮಾಫಿಯಾ ಏನಾದರೂ ಇದೆಯಾ? ಎಂಬ ಆಯಮದಲ್ಲೂ ತನಿಖೆ ನಡೆಸುವುದಾಗಿ ತನಿಖಾಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net