ರಸ್ತೆಬದಿಯಲ್ಲಿ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು ಪಾಠ ಹೇಳಿಕೊಟ್ಟ ಹಣ್ಣು ಮಾರುವ ಮಹಿಳೆ; ಹೃದಯಸ್ಪರ್ಶಿ ವಿಡಿಯೋ ವೈರಲ್

viral (1)
Published on

ನವದೆಹಲಿ: ಪ್ರತಿ ತಂದೆ, ತಾಯಿಗೂ ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆ ಇರುತ್ತದೆ. ಹಾಗಾಗಿ ಎಂಥಹ ಸಮಸ್ಯೆ ಎದುರಾದರೂ ಸರಿ ಅದನ್ನು ಎದುರಿಸಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾರೆ. ಅನುಕೂಲವಿರುವವರೇನೋ ಸರಿ, ಆದರೆ ಕೆಳ ಮಧ್ಯಮ ವರ್ಗದ ಕುಟುಂಬಗಳು ಈ ಸಲುವಾಗಿ ಏನೆಲ್ಲಾ ಕಷ್ಟಗಳನ್ನು ಎದುರಿಸಬಹುದು ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದ್ದು, ಇದು ತಾಯಿ ಮತ್ತು ಆಕೆಯ ಮಕ್ಕಳ ನಡುವಿನ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ.

ಬೀದಿ ಬದಿ ಹಣ್ಣುಗಳನ್ನು ಮಾರುತ್ತಿರುವ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ಪಾಠ ಹೇಳಿಕೊಡುವ ಹೃದಯಸ್ಪರ್ಶಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಮೈಕ್ರೋಬ್ಲಾಗಿಂಗ್ ಸೈಟ್ X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಈ ಕ್ಲಿಪ್ ಶಿಕ್ಷಣದ ಮೌಲ್ಯದ ಬಗ್ಗೆಯೂ ನಮಗೆ ಪ್ರಮುಖ ಸಂದೇಶ ನೀಡುತ್ತದೆ.

'ಇಂದು ಶೀರ್ಷಿಕೆಗೆ ನನ್ನ ಬಳಿ ಯಾವುದೇ ಪದಗಳಿಲ್ಲ' ಎಂದು ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಅವರು ವೀಡಿಯೋ ಜೊತೆಗೆ ಹಂಚಿಕೊಂಡಿರುವ ಪೋಸ್ಟ್​​​​​ನಲ್ಲಿ ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ನಾವು ನೋಡುವ ಹಾಗೆ "ರಸ್ತೆಯ ಬದಿಯಲ್ಲಿ ಹಣ್ಣಿನ ಗಾಡಿಯ ಹಿಂದೆ ಮಹಿಳೆ ನಿಂತಿದ್ದಾರೆ. ಆಕೆಯ ಮಕ್ಕಳು ಗಾಡಿಯ ಹಿಂದೆ ನೆಲದ ಮೇಲೆ ತಮ್ಮ ಕೈಯಲ್ಲಿ ಪುಸ್ತಕವನ್ನು ಮತ್ತು ಅವರ ಹತ್ತಿರ ಶಾಲಾ ಚೀಲವನ್ನು ಇಟ್ಟುಕೊಂಡಿರುವುದನ್ನು ಕಾಣಬಹುದು. ಮಕ್ಕಳಲ್ಲಿ ಒಬ್ಬರು ಪಠ್ಯಪುಸ್ತಕದಲ್ಲಿ ಏನನ್ನಾದರೂ ಬರೆಯಲು ಪ್ರಯತ್ನಿಸುತ್ತಿರುವಾಗ, ಮಹಿಳೆ ಗಾಡಿಯನ್ನು ಬಿಟ್ಟು, ಅವನ ಬಳಿಗೆ ಬಂದು ಮಡಿಲಲ್ಲಿ ಕೂರಿಸಿ ಬರೆಯಲು ಮಾರ್ಗದರ್ಶನ ನೀಡುತ್ತಾರೆ''. ಸದ್ಯ ಈ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ, 3,688 ಲೈಕ್ಸ್ ಮತ್ತು ಟನ್‌ಗಳಷ್ಟು ಕಾಮೆಂಟ್‌ಗಳನ್ನು ಸಂಗ್ರಹಿಸಿದೆ.

ಹೀಗಿದೆ ನೆಟ್ಟಿಗರ ಪ್ರತಿಕ್ರಿಯೆಗಳು....

"ಪಡೇಗಾ ಇಂಡಿಯಾ ತಭಿ ಆಗೆ ಬಡೇಗಾ ಇಂಡಿಯಾ, ಕಿತ್ನಿ ಸಮ್ಜ್ದಾರ್ ಮಾ ಹೈ. ಈ ಮಹಿಳೆಗೆ ಸೆಲ್ಯೂಟ್"

"ತಾಯಿಯ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಮಕ್ಕಳ ಮೇಲಿನ ಆಕೆಯ ಕಾಳಜಿ ಯಾವಾಗಲೂ ಅಮೂಲ್ಯವಾದುದು"

" ಅವರು ಚಪ್ಪಲಿ ತೆಗೆದು ಟಾರ್ಪಾಲಿನ್ ಮೇಲೆ ನಡೆದು ತನ್ನ ಮಕ್ಕಳಿಗೆ ಕಲಿಸಲು ಕುಳಿತುಕೊಳ್ಳುವುದನ್ನು ಗಮನಿಸಿ. ದೇವರು ಅವರನ್ನು ಆಶೀರ್ವದಿಸಲಿ''. ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿರುವುದನ್ನು ನೀವು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net