

ಈ ಮಹಿಳೆಗೆ ಕೆಲಸಕ್ಕೆ ರಜಾ ಹಾಕಬೇಕು ಎಂದೆನಿಸಿತ್ತು. ಆದರೆ ಬಾಸ್ಗೆ ಏನು ಹೇಳೋದು? ಸುಮ್ಮಸುಮ್ಮನೆ ರಜಾ ಹಾಕಿದ್ರೆ ಖಂಡಿತ ಬೈಸಿಕೊಳ್ಳಬೇಕು...
ತುಂಬ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದರು. ಅದರಂತೆ ತಮ್ಮ ಬಾಸ್ಗೆ ಒಂದು ಫೋಟೋವನ್ನೂ ಕಳಿಸಿದರು. ಆದರೆ ಆ ಫೋಟೋನಾ ಮಹಿಳೆಯ ಸಹೋದ್ಯೋಗಿಯೋರ್ವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದೇ ತಡ ನೆಟ್ಟಿಗರು ಫುಲ್ ನಗುತ್ತಿದ್ದಾರೆ. ಕೆಲಸ ತಪ್ಪಿಸಿಕೊಳ್ಳಲು ಗಿಮಿಕ್ ಮಾಡಲು ಹೋದ ಮಹಿಳೆಗೆ ಸಿಕ್ಕಾಪಟೆ ಕಾಲೆಳೆಯುತ್ತಿದ್ದಾರೆ.
ಏನಿದು ಕತೆ? ಹೀಗಿದೆ ನೋಡಿ...ಮಹಿಳೆಯೋರ್ವರು ನಾನು ಕೆಲಸಕ್ಕೆ ಬರುವುದಿಲ್ಲ ಎಂದು ಮನೆಯಿಂದಲೇ ತಮ್ಮ ಬಾಸ್ಗೆ ತಿಳಿಸಲು ನೆಪ ಹುಡುಕಿದರು. ಹಾಗೇ ತಮ್ಮ ಕಾರು ಪಂಕ್ಚರ್ ಆಯಿತು. ಹಾಗಾಗಿ ನಿಯಂತ್ರಣ ಕಳೆದುಕೊಂಡು ಸಣ್ಣ ಪ್ರಮಾಣದ ಆ್ಯಕ್ಸಿಡೆಂಟ್ ಆಗಿದೆ ಎಂದು ಬಿಂಬಿಸಲು ನಿರ್ಧರಿಸಿದರು. ಅದೇ ರೀತಿ ಟೈಯರ್ಗೆ ಮೊಳೆ ಚುಚ್ಚಿಕೊಂಡಿರುವ ಫೋಟೋವನ್ನೂ ಬಾಸ್ಗೆ ಕಳಿಸಿದರು. ಆದರೆ ಇದು ಪಕ್ಕಾ ಫೇಕ್ ಫೋಟೋ ಆಗಿತ್ತು. ಫೋಟೋ ಶಾಪ್ನಲ್ಲಿ ಎಡಿಟ್ ಮಾಡಿ ಕಳಿಸಿದ ಚಿತ್ರವಾಗಿತ್ತು.
ಅದೆಷ್ಟು ಕೆಟ್ಟದಾಗಿ ಎಡಿಟ್ ಮಾಡಿದ್ದರು ಎಂದರೆ ಅದನ್ನು ನೋಡಿದರೆ ಎಂಥವರಿಗಾದರೂ ಇದೊಂದು ಸುಳ್ಳು ಫೋಟೋ ಎಂಬುದು ಗೊತ್ತಾಗುತ್ತಿತ್ತು. ಆ ಟೈಯರ್ಗೂ, ಮೊಳೆಗೂ ಅದು ಚುಚ್ಚಿಕೊಂಡ ರೀತಿಗೂ ತಾಳೆಯೇ ಆಗುತ್ತಿರಲಿಲ್ಲ.
ಮಹಿಳೆಯ ಸಹೋದ್ಯೋಗಿಯೋರ್ವರು ಫೋಟೋವನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡು, ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯೋರ್ವರು ಈ ಫೋಟೋವನ್ನು ಬಾಸ್ಗೆ ಕಳಿಸಿ ರಜೆ ಕೇಳಿದ್ದಾರೆ. ಆದರೆ ನೀವೆಲ್ಲರೂ ಈಗ ಮಾಡುತ್ತಿರುವ ಕೆಲಸವನ್ನು ಬಿಟ್ಟು ಫೋಟೋದಲ್ಲಿರುವ ಮೊಳೆಯನ್ನು ಒಮ್ಮೆ ಝೂಮ್ ಮಾಡಿ ನೋಡಿ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಈ ಟ್ವೀಟ್ ಇದುವರೆಗೆ 45 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದ್ದು ವಿಪರೀತ ವೈರಲ್ ಆಗುತ್ತಿದೆ. ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಮಹಿಳೆಯ ಕಾಲೆಳೆಯುತ್ತಿದ್ದಾರೆ. ವಿವಿಧ ಮೀಮ್ಸ್ಗಳನ್ನು ಕಾಮೆಂಟ್ ಸೆಕ್ಷನ್ನಲ್ಲಿ ಹಾಕಿ ನಗುತ್ತಿದ್ದಾರೆ. ಅಂದಹಾಗೆ ಈ ಎಡವಟ್ಟು ನಡೆದಿದ್ದು ಆಸ್ಟ್ರೇಲಿಯಾದಲ್ಲಿ. (ಏಜೆನ್ಸೀಸ್)