ಜಿಲ್ಲೆಯ ಗಡಿದಾಟಲು ಬಿಡದ ಪೊಲೀಸರು...ರಸ್ತೆ ಮಧ್ಯೆಯೇ ಪ್ರಾಣಬಿಟ್ಟ 45ರ ಮಹಿಳೆ

Died
Published on

ರಾಯ್ಪುರ: ಮಹಿಳೆಯೋರ್ವರು ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಇದಕ್ಕೆ ಪೊಲೀಸರೇ ಹೊಣೆ ಎಂಬ ಆರೋಪ ಕೇಳಿಬರುತ್ತಿದೆ.

ಅನಾರೋಗ್ಯಕ್ಕೆ ಒಳಗಾಗಿದ್ದ ಮಹಿಳೆಗೆ ಚಿಕಿತ್ಸೆಗಾಗಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಬೇಕಿತ್ತು. ಆದರೆ ಪೊಲೀಸರು ಅವರಿಗೆ ಅವಕಾಶ ಕೊಡಲಿಲ್ಲ. ಸದ್ಯ ಕರೊನಾ ಇರುವುದರಿಂದ ಒಂದು ಜಿಲ್ಲೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೆ ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಿದೆ. ಆದರೆ ಮಹಿಳೆಯ ಬಳಿ ಅವೆಲ್ಲ ಇಲ್ಲ ಎಂಬ ಒಂದೇ ಕಾರಣಕ್ಕೆ ಪೊಲೀಸರು ಜಿಲ್ಲೆಯಿಂದ ಹೊರಹೋಗಲು ಬಿಡಲಿಲ್ಲ ಎನ್ನಲಾಗಿದೆ.

45 ವರ್ಷದ ಮಹಿಳೆ ಕಳೆದ ವಾರದಿಂದಲೂ ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿದ್ದಾರೆ. ಈಕೆಯ ಗಂಡನ ಹೆಸರು ರಾಮಧರ್​ ಪಣಿಕಾ. ಇವರು ಪತ್ನಿಯನ್ನು ವಾಹನದಲ್ಲಿ ಕರೆದುಕೊಂಡು ಅಂಬಿಕಾಪುರ ಜಿಲ್ಲಾಸ್ಪತ್ರೆಗೆ ಹೊರಟಿದ್ದರು. ಆ ಆಸ್ಪತ್ರೆಗೆ ಹೋಗಬೇಕೆಂದರೆ ಅವರು ಸರ್ಜಾಪುರ ಜಿಲ್ಲೆಯ ಗಡಿಯನ್ನು ದಾಟಲೇಬೇಕಿತ್ತು. ಅಲ್ಲಿದ್ದ ಪೊಲೀಸರು ಯಾವ ಕಾರಣಕ್ಕೂ ದಾಖಲೆಗಳಿಲ್ಲದೆ ಗಡಿ ದಾಟಲು ಬಿಡುವುದಿಲ್ಲ ಎಂದು ಹೇಳಿದ್ದೇ ದುರ್ಘಟನೆಗೆ ಕಾರಣವಾಗಿದೆ. ರಾಮಧರ್ ಅವರು ಪತ್ನಿಯ ವೈದ್ಯಕೀಯ ದಾಖಲೆಗಳನ್ನು ತೋರಿಸಿದರೂ ಕೂಡ ಅವರು ಮುಂದೆ ಹೋಗಲು ಬಿಡಲಿಲ್ಲ. ಇದನ್ನೂ ಓದಿ: ಜನರ ತಲೆಗೆ ಹುಳ ಬಿಟ್ಟ ಈ ಜೀವಿ ಯಾವುದು ಗುರುತಿಸುವಿರಾ?: 15 ಅಡಿ ಉದ್ದ, ಎಲ್ಲವೂ ನಿಗೂಢ!

ಇ-ಪಾಸ್​ ತೋರಿಸುವಂತೆ ಪೊಲೀಸರು ದಂಪತಿಯ ಬಳಿ ಕೇಳಿದ್ದಾರೆ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿ ಇರುವುದರಿಂದ ಅದನ್ನೇನೂ ಪಡೆಯದೆ ಹೊರಟಿದ್ದರು. ಪೊಲೀಸರು ಗಡಿಯಲ್ಲಿ ದಂಪತಿಯನ್ನು ತಡೆದು ನಿಲ್ಲಿಸಿದ ಕಾರಣ ಮಹಿಳೆ ವಾಹನದಲ್ಲಿಯೇ ಮೃತಪಟ್ಟಿದ್ದಾರೆ. ಮನೆಯಿಂದ 10 ಕಿ.ಮೀ.ದೂರದಲ್ಲಿ ಆಕೆ ಸಾವನ್ನಪ್ಪಿದ್ದಾರೆ.

ಘಟನೆಯ ಬಗ್ಗೆ ಸರ್ಜಾಪುರ ಜಿಲ್ಲಾಧಿಕಾರಿ ರಂಬೀರ್​ ಶರ್ಮಾ ತನಿಖೆಗೆ ಆದೇಶಿಸಿದ್ದಾರೆ. ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಆರೋಪವನ್ನು ನಿರಾಕರಿಸುತ್ತಿದ್ದಾರೆ. ಆದರೆ ತನಿಖೆಯ ಬಳಿಕವಷ್ಟೇ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net