

ಕಬೀರ್ದಾಮ್ (ಛತ್ತೀಸ್‌ಗಢ ): ಮೂರು ರಾಜ್ಯಗಳಿಗೆ ಬೇಕಾಗಿದ್ದ ಮಹಿಳಾ ನಕ್ಸಲ್ ಹಿಡ್ಮೆ ಕೊವಾಸಿ ಅಲಿಯಾಸ್ ರನಿತಾ (22) ಅವರು ಛತ್ತೀಸ್‌ಗಢದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಶನಿವಾರ ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಡ್ಮೆ ಕೊವಾಸಿ ಅಲಿಯಾಸ್ ರನಿತಾ ಅವರ ಪತ್ತೆಗೆ ತೀವ್ರ ಹುಡುಕಾಟ ನಡೆಸುತ್ತಿದ್ದ ವಿವಿಧ ರಾಜ್ಯಗಳು ಅವರ ಬಗ್ಗೆ ಸುಳಿವು ನೀಡಿದವರಿಗೆ 13 ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದವು. ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ರಾಜ್ಯಗಳು ತಲಾ 5 ಲಕ್ಷ ರೂ. ಹಾಗೂ ಮಧ್ಯಪ್ರದೇಶ 3 ಲಕ್ಷ ರೂ.ಗಳನ್ನು ಅವರ ತಲೆಗೆ ಬಹುಮಾನವಾಗಿ ಪ್ರಕಟಿಸಿದ್ದವು.
ಮಧ್ಯಪ್ರದೇಶದ ಬಾಲಘಾಟ್ನಲ್ಲಿ ನಡೆದ ಮಾವೋವಾದಿ ಹಿಂಸಾಚಾರ ಸೇರಿದಂತೆ 19 ಘಟನೆಗಳಲ್ಲಿ ಮತ್ತು ಖೈರಗಢ-ಚುಯಿಖಾಡನ್‌ನಲ್ಲಿ ಮೂರು ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದಾಳೆ. ಛತ್ತೀಸ್‌ಗಢದ ಗಂಡೈ ಜಿಲ್ಲೆಯ ಹಿಂಸಾಚಾರದಲ್ಲಿ ರನಿತಾ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ನಕ್ಸಲು ನಡೆಸುವ ದೌರ್ಜನ್ಯ ಮತ್ತು ಮಾವೋ ಸಿದ್ಧಾಂತದಿಂದ ಬೇಸತ್ತು ರನಿತಾ ಅವರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದಾರೆ. ಅವರಿಗೆ ರಾಜ್ಯ ಸರ್ಕಾರದ ಪುನರ್ವಸತಿ ನೀತಿಯಡಿಯಲ್ಲಿ 25,000 ಸಾವಿರ ರೂಪಾಯಿ ಆರ್ಥಿಕ ನೆರವು ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.