ಜಮ್ಮು ಕಾಶ್ಮೀರ: ಪಾಕ್‌ಗೆ ಮೋದಿ ಎಚ್ಚರಿಕೆ ಬೆನ್ನಲ್ಲೇ ಗಡಿಯಲ್ಲಿ 2000 ಸಾವಿರ ಸೈನಿಕರ ನಿಯೋಜಿಸಿದ ಕೇಂದ್ರ!

bsf
Published on

ಶ್ರೀನಗರ: ಪಾಕಿಸ್ತಾನ ಇತಿಹಾಸದ ಅನುಭವದಿಂದ ಏನನ್ನೂ ಕಲಿತಿಲ್ಲ, ಮತ್ತೆ ಮತ್ತೆ ಭಯೋತ್ಪಾದನೆಯ ವಿಷಯದಲ್ಲಿ ಭಾರತವನ್ನು ಕೆಣಕಿದರೆ ತಕ್ಕ ಶಾಸ್ತಿ ಮಾಡಲಾಗುವುದು, ಭಯೋತ್ಪಾದನೆಯನ್ನು ಮಟ್ಟಹಾಕುತ್ತೇವೆ ಎಂದು ಜುಲೈ 26 ರಂದು ಪ್ರಧಾನಿ ನರೇಂದ್ರ ಮೋದಿ ನೇರವಾಗಿಯೇ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಜಮ್ಮು-ಕಾಶ್ಮೀರ ಗಡಿಯಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಮಿತಿ ಮೀರಿದ್ದು, ಸೈನಿಕರು, ವಲಸಿಗರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಜಮ್ಮು-ಕಾಶ್ಮೀರ ಗಡಿಯಲ್ಲಿ ಹೆಚ್ಚುವರಿಯಾಗಿ ಎರಡು ಸಾವಿರ ಸೈನಿಕರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

ಕಾಶ್ಮೀರದ ಗಡಿಯಲ್ಲಿ ಹೆಚ್ಚುವರಿಯಾಗಿ 2 ಸಾವಿರ ಗಡಿ ಭದ್ರತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ, ಗಡಿಯಲ್ಲಿ ಉಗ್ರರ ಉಪಟಳ, ಒಳನುಸುಳುವಿಕೆ, ದಾಳಿ, ಶಸ್ತ್ರಾಸ್ತ್ರ ಸಾಗಣೆ ಸೇರಿ ಹಲವು ಕೃತ್ಯಗಳು ಹೆಚ್ಚಾಗಿರುವ ಕಾರಣ ಹೆಚ್ಚಿನ ಭದ್ರತೆಗಾಗಿ ಬಿಎಸ್‌ಎಫ್‌ ಯೋಧರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಜಮ್ಮು ಪ್ರದೇಶದ ಗುಡ್ಡಗಾಡು ಜಿಲ್ಲೆಗಳ ಪ್ರದೇಶದಲ್ಲಿ ಸುಮಾರು 40 ರಿಂದ 50 ಪಾಕಿಸ್ತಾನಿ ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಲು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಧಾನಿ ಮೋದಿ ಎಚ್ಚರಿಕೆ ಏನಾಗಿತ್ತು?: ಕಾರ್ಗಿಲ್‌ ವಿಜಯ ದಿವಸಕ್ಕೆ ಜುಲೈ 26ಕ್ಕೆ 25ವರ್ಷ ಸಂದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಪಾಕಿಸ್ತಾನ ಈ ಹಿಂದೆ ತನ್ನ ಎಲ್ಲಾ ಕೆಟ್ಟ ಪ್ರಯತ್ನಗಳಲ್ಲಿ ವಿಫಲವಾಗಿದೆ. ಭಯೋತ್ಪಾದನೆ ಮತ್ತು ನಕಲಿ ಯುದ್ಧದ ಮೂಲಕ ಭಾರತವನ್ನು ಕೆಣಕಲು ಬಯಸಿದರೆ ನೇರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಭಾರತ ಪ್ರತಿಯೊಂದು ಭಯೋತ್ಪಾದಕ ಸವಾಲನ್ನು ಸೋಲಿಸುತ್ತದೆ. ಭಯೋತ್ಪಾದನೆಯ ಪೋಷಿಸುವ ದೇಶಗಳಿಗೂ ಇದರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ದುಷ್ಟ ಉದ್ದೇಶಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ನಮ್ಮ ಸೈನಿಕರು ಭಯೋತ್ಪಾದನೆ ಹತ್ತಿಕ್ಕುತ್ತಾರೆ. ಸಂಪೂರ್ಣ ಶಕ್ತಿ ಮತ್ತು ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಗುಡುಗಿದ್ದಾರೆ.ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿಗಳು ಹೆಚ್ಚಾಗುತ್ತಿರುವ ನಡುವೆ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಎಚ್ಚರಿಕೆ ಮುಟ್ಟಿನೋಡಿಕೊಳ್ಳುವತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net