ಇದು ಸಲ್ಮಾನ್​ ಖಾನ್ ಕುದುರೆ ಅಂದ್ರು, ನಂಬಿದ ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 12 ಲಕ್ಷ ರೂ.!

Untitled-1
Published on

ನವದೆಹಲಿ: ಯಾರಿಗೋ ಸೇರಿದ ಸೈಟನ್ನು ಇನ್ಯಾರಿಗೋ ತೋರಿಸಿ ಹಣ ಪಡೆದು ಮೋಸ ಮಾಡಿದ ಉದಾಹರಣೆಗಳು ಬೇಕಾದಷ್ಟಿವೆ. ಇದು ಕೂಡ ಅಂಥದ್ದೇ ಪ್ರಕರಣವಾಗಿದ್ದರೂ ಸ್ವಲ್ಪ ವಿಭಿನ್ನವಾಗಿದೆ. ಅರ್ಥಾತ್ ಕುದುರೆಯ ಫೋಟೋ ತೋರಿಸಿ ಇದು ಸಲ್ಮಾನ್​ ಖಾನ್​ ಕುದುರೆ ಎಂದು ನಂಬಿಸಿದ್ದ ವಂಚಕರು, ಮಹಿಳೆಯೊಬ್ಬರಿಂದ 12 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾರೆ.

ರಾಜಸ್ಥಾನದ ಜೋಧಪುರದ ಸಂತೋಷ ಭಾಟಿ ಎಂಬಾಕೆಗೆ ಕುದುರೆಯೊಂದರ ಜತೆ ಸಲ್ಮಾನ್​ ಖಾನ್​ ಇರುವ ಫೋಟೋ ತೋರಿಸಿದ್ದ ಮೂವರು, ಖಾನ್​ ಈ ಕುದುರೆ ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ತಾವು ಸಲ್ಮಾನ್​ ಖಾನ್​ಗೆ ಆಪ್ತರು ಎಂಬಂತೆ ಬಿಂಬಿಸಿಕೊಂಡಿರುವ ಅವರು ಈ ಹಿಂದೆಯೂ ಸಲ್ಮಾನ್​​ ಖಾನ್​ಗೆ ಸೇರಿದ್ದ ಹಲವಾರು ಕುದುರೆಗಳನ್ನು ಮಾರಾಟ ಮಾಡಿದ್ದಾಗಿಯೂ ಹೇಳಿದ್ದಾರೆ.

ಇದನ್ನು ನಂಬಿದ ಮಹಿಳೆ 11 ಲಕ್ಷ ರೂ. ನಗದು ಹಾಗೂ 1 ಲಕ್ಷ ರೂ. ಚೆಕ್​ ಸೇರಿ ಒಟ್ಟು 12 ಲಕ್ಷ ರೂ. ನೀಡಿದ್ದರು. ಆಗಸ್ಟ್​ನಲ್ಲಿ ಈ ಹಣ ನೀಡಲಾಗಿದ್ದರೂ ಕುದುರೆಯನ್ನು ನೀಡದ್ದರಿಂದ ಪೊಲೀಸರ ಮೊರೆಹೋದ ಮಹಿಳೆ ದೂರು ನೀಡಿದ್ದರು. ಆದರೆ ಪೊಲೀಸರು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳದ್ದರಿಂದ ತೀವ್ರ ಅಸಮಾಧಾನಕ್ಕೆ ಒಳಗಾಗಿರುವ ಮಹಿಳೆ, ಪ್ರಕರಣ ಸಂಬಂಧ ಸೂಕ್ತ ತನಿಖೆಗೆ ಆದೇಶಿಸುವಂತೆ ಕೋರಿ ರಾಜಸ್ಥಾನ ಹೈಕೋರ್ಟ್​ ಮೊರೆ ಹೋಗಿದ್ದರು. ಈ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಇತ್ಯರ್ಥಗೊಳಿಸಿರುವ ಹೈಕೋರ್ಟ್, ಕಾನೂನು ಪ್ರಕಾರ ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿತ ಡಿಸಿಪಿಗೆ ಸೂಚನೆ ನೀಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net