ನಾನು ಪಾರ್ವತಿಯ ಅವತಾರ, ಶಿವನನ್ನು ಮದುವೆಯಾಗಬೇಕೆಂದು ಕೈಲಾಸ ಪರ್ವತದಲ್ಲೇ ಕುಳಿತಿರುವ ಮಹಿಳೆ!

Kailasa
Published on

ಪಿತೋರ್​​ಗಢ: ನಾನು ಪಾರ್ವತಿಯ ಅವತಾರ, ಶಿವನನ್ನೇ ಮದುವೆಯಾಗಬೇಕೆಂದು, ಸೀದಾ ಈ ಮಹಿಳೆ ಹೋಗಿರುವುದು ಕೈಲಾಸ ಪರ್ವತಕ್ಕೆ. ಆದರೀಗ ಈ ಮಹಿಳೆಯಿಂದ ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರ ಪೊಲೀಸರು.

ಈಕೆ.. ಕೈಲಾಸ ಪರ್ವತಕ್ಕೆ ಹೋಗಿ ಬಂದಿದ್ದರೆ ಸಮಸ್ಯೆ ಇರಲಿಲ್ಲ, ಆದರೆ ಅಲ್ಲೇ ಬೀಡುಬಿಟ್ಟಿದ್ದು, ಶಿವನನ್ನು ಮದುವೆಯಾಗುತ್ತೇನೆ ಎಂದು ಅಲ್ಲಿಂದ ಕದಲುತ್ತಿಲ್ಲ. ಅಂದಹಾಗೆ ನಿರ್ಬಂಧಿತ ಪ್ರದೇಶದಲ್ಲಿ ಈಕೆ ಇರುವುದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದು ನಿರ್ಬಂಧಿತ ಪ್ರದೇಶವಾಗಿದೆ. ಇಲ್ಲಿ ಜನರು ಹೆಚ್ಚು ಸಮಯ ಇರುವಂತಿಲ್ಲ. ಇಂಡೋ-ಚೀನಾ ಗಡಿ ಭಾಗವಾಗಿರುವ ಈ ಪ್ರದೇಶದಲ್ಲಿ ಜನರ ಓಡಾಟ ತೀರಾ ವಿರಳ.

ಈಕೆ ಹೆಸರು ಹರ್ಮಿಂದರ್​ ಕೌರ್​, ಈಕೆಯನ್ನು ವಶಕ್ಕೆ ಪಡೆಯಲು ಹೋದ ಪೊಲೀಸರು ಮಾತ್ರ ನಿರಾಸೆಯಿಂದ ವಾಪಸ್ಸಾಗಿದ್ದಾರೆ. ಒಂದು ವೇಳೆ ನನ್ನನ್ನು ಹಿಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ನಾವು ಅಲ್ಲಿಂದ ವಾಪಸ್ಸಾಗಬೇಕಾಯಿತು ಎಂದು ಎಸ್​​ಪಿ ಲೋಕೇಂದ್ರ ಸಿಂಗ್​ ಹೇಳಿದ್ದಾರೆ.

ಉತ್ತರ ಪ್ರದೇಶದ ಅಲಿಗಂಜ್​​ ಮೂಲದವಳಾದ ಈ ಮಹಿಳೆ 15 ದಿನಗಳ ಕಾಲ ಪ್ರವಾಸಕ್ಕೆ ಅನುಮತಿ ಪಡೆದಿದ್ದಳು. ಈಗ ಅವಧಿ ಮುಗಿದಿದ್ದರೂ ವಾಪಸ್ಸಾಗದ ಹಿನ್ನಲೆಯಲ್ಲಿ ಈಕೆ ಇಲ್ಲೇ ಇರುವ ಬಗ್ಗೆ ಮಾಹಿತಿ ದೊರೆತಿದ್ದರಿಂದ ಪೊಲೀಸರು ಈಕೆಯನ್ನು ಹುಡುಕಿ ಕೈಲಾಸ ಪರ್ವತಕ್ಕೆ ತೆರಳಿದ್ದರು.

ಮೊದಲ ಪ್ರಯತ್ನ ಮಾಡಿದ ಪೊಲೀಸರು ಬರಿಗೈಯಲ್ಲಿ ವಾಪಸ್ಸಾಗಿದ್ದರು, ಶುಕ್ರವಾರ 12 ಪೊಲೀಸರ ತಂಡ ವೈದ್ಯಕೀಯ ನೆರವಿನ ಜತೆಗೆ ಹೊಗಿ ಮಹಿಳೆಯನ್ನು ಕೊನೆಗೂ ವಾಪಸ್​ ಕರೆತಂದಿದ್ದಾರೆ. ಸದ್ಯ ಈಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲೋಕೇಂದ್ರ ಸಿಂಗ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net