ಯುವಕನ ಜತೆ ಅಕ್ರಮ ಸಂಬಂಧ: ಗಂಡನನ್ನು ಕೊಂದು ಟೈಲ್ಸ್​ ಕೆಳಗೆ ಹೂತಿಟ್ಟ ಕಿರಾತಕಿ ಸಿಕಿಬಿದ್ದಿದ್ದೇ ರೋಚಕ! Woman kills Husband

Woman kills Husband
Published on

Woman kills Husband : ದೃಶ್ಯಂ ಸಿನಿಮಾ ಎಂದ ತಕ್ಷಣ ನೆನಪಿಗೆ ಬರುವುದು ಕೊಲೆಯ ಸುತ್ತ ಸುತ್ತುವ ಒಟ್ಟಾರೆ ಸನ್ನಿವೇಶ. ಈ ಸಿನಿಮಾ ತುಂಬಾ ಆಸಕ್ತಿದಾಯಕವಾಗಿದೆ. ಹೀಗಾಗಿಯೇ ಈ ಸಿನಿಮಾ ಬಂದು ಸುಮಾರು ಒಂದು ದಶಕ ಕಳೆದಿದ್ದರೂ ಟಿವಿಯಲ್ಲಿ ಬಂದಾಗಲೆಲ್ಲಾ ಸಿನಿ ರಸಿಕರು ನೋಡುತ್ತಲೇ ಇರುತ್ತಾರೆ. ಕೊಲೆಯಾದ ವ್ಯಕ್ತಿಯ ದೇಹವನ್ನು ನಿರ್ಮಾಣ ಹಂತದಲ್ಲಿರುವ ಪೊಲೀಸ್ ಠಾಣೆಯ ಒಳಗೆ ಹೂತು ಹಾಕುವುದು ಈ ಚಿತ್ರದ ಹೈಲೈಟ್ ಆಗಿದೆ.

ತನ್ನ ಮಗಳಿಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯನ್ನು ತಾಯಿ ಕೊಂದಾಗ, ತಂದೆ ಮುಂದೆ ನಿಂತು, ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವುದಕ್ಕೆ ಇಡೀ ಪ್ರಕರಣವನ್ನು ತಿರುಚುವ ದೃಶ್ಯಗಳು ತುಂಬಾ ಆಸಕ್ತಿದಾಯಕವಾಗಿವೆ. ಇದು ಸಿನಿಮಾ ಆಗಿರುವುದರಿಂದ ಆಸಕ್ತಿದಾಯಕವಾಗಿ ಕಾಣುತ್ತದೆ. ಆದರೆ, ಇಂತಹ ಘಟನೆ ನಿಜ ಜೀವನದಲ್ಲಿ ಸಂಭವಿಸಿದಲ್ಲಿ, ಅದರ ಪರಿಸ್ಥಿತಿ ಬೇರೆಯದ್ದೇ ಇರುತ್ತದೆ.

ದೃಶ್ಯ ಸಿನಿಮಾ ಮಾದರಿಯಲ್ಲೇ ಒಂದು ಕೊಲೆ ನಡೆದಿದೆ. ಒಬ್ಬ ಮಹಿಳೆ ತನ್ನ ಗಂಡನನ್ನು ಕೊಂದು ಯಾರಿಗೂ ಅನುಮಾನ ಬರದಂತೆ ತನ್ನ ಮನೆಯ ಟೈಲ್ಸ್​ ಕೆಳಗೆ ಹೂತು ಹಾಕಿದ್ದಳು. ತನ್ನ ಪ್ರಿಯಕರನೊಂದಿಗೆ ಸೇರಿ ಆಕೆ ಈ ಕೃತ್ಯವನ್ನು ಎಸಗಿದ್ದಾಳೆ. ಈ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

35 ವರ್ಷದ ವಿಜಯ್ ಚೌವಾಣ್ ಮತ್ತು 28 ವರ್ಷದ ಕೋಮಲಾ ಚೌವಾಣ್ ಕೆಲವು ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದರು. ಮುಂಬೈನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಹೀಗಿರುವಾಗ ದಾಂಪತ್ಯದಲ್ಲಿ ಒಂದು ತಿರುವು ಪಡೆದುಕೊಂಡಿತು. ಅದೇನೆಂದರೆ, ದಂಪತಿ ನಡುವೆ ಮೂರನೇ ವ್ಯಕ್ತಿ ಆಗಮಿಸಿದನು.

ಕೋಮಲಾ ತನ್ನ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಮೋನು ಶರ್ಮಾ (20) ನನ್ನು ಭೇಟಿಯಾದಳು. ಈ ಭೇಟಿ ಸ್ವಲ್ಪ ಸಮಯದ ನಂತರ, ವಿವಾಹೇತರ ಸಂಬಂಧವಾಗಿ ಬದಲಾಯಿತು. ಕೋಮಲಾ ಮತ್ತು ಮೋನು ಶರ್ಮಾ, ವಿಜಯ್​ ಇಲ್ಲದಿದ್ದಾಗ ಭೇಟಿಯಾಗುತ್ತಿದ್ದರು. ಕೆಲವು ದಿನಗಳ ನಂತರ, ವಿಜಯ್​ಗೆ ಪತ್ನಿಯ ವರ್ತನೆಯ ಮೇಲೆ ಅನುಮಾನ ಬಂತು. ಏನಿರಬಹುದು ಅಂತ ಪರಿಶೀಲಿಸಿದಾಗ ಆಕೆಯ ಅಕ್ರಮ ಸಂಬಂಧ ಬಯಲಾಯಿತು. ಬಳಿಕ ಕೋಮಲಾಳ ನಡೆಯನ್ನು ವಿಜಯ್​ ಖಂಡಿಸಿದನು.

ಮೋನು ಶರ್ಮಾ ಜೊತೆಗಿನ ವಿವಾಹೇತರ ಸಂಬಂಧದ ಬಗ್ಗೆ ಗಂಡನಿಗೆ ಗೊತ್ತಾದ ಬೆನ್ನಲ್ಲೇ ತನಗಿರುವ ಅಡೆತಡೆಗಳನ್ನು ತೆಗೆದುಹಾಕಲು ಕೋಮಲಾ ನಿರ್ಧರಿಸಿದಳು. ಮೋನು ಶರ್ಮಾಗೆ ಈ ಬಗ್ಗೆ ಹೇಳಿದಾಗ, ಆತನೂ ಒಪ್ಪಿಕೊಂಡನು. ಬಳಿಕ ಅವರಿಬ್ಬರೂ ವಿಜಯ್​ನನ್ನು ಕೊಂದು ಮನೆಯ ನೆಲದ ಟೈಲ್ಸ್ ಅಡಿಯಲ್ಲಿ ಹೂತುಹಾಕಿದರು. ಇದಾದ ಎರಡು ದಿನಗಳ ನಂತರ, ವಿಜಯ್ ಅವರ ಕಿರಿಯ ಸಹೋದರ ಮನೆಗೆ ಬಂದನು. ಆತ ತನ್ನ ಸಹೋದರನಿಗಾಗಿ ಹುಡುಕಿದನು. ಆದರೆ, ಆತ ಎಲ್ಲಿಯೂ ಸಿಗದಿದ್ದಾಗ, ಹತ್ತು ದಿನಗಳ ನಂತರ ತನ್ನ ಸಹೋದರ ವಿಜಯ್ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದನು. ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡರು. ಇದೇ ಸಂದರ್ಭದಲ್ಲಿ ಕೋಮಲಾ ಮತ್ತು ಮೋನು ಶರ್ಮಾ ನಾಪತ್ತೆಯಾಗುತ್ತಾರೆ.

ಕಾಣೆಯಾಗಿದ್ದನ್ನು ನೋಡಿ ವಿಜಯ್ ಚೌಹಾಣ್ ಅವರ ಕಿರಿಯ ಸಹೋದರ, ಕೋಮಲಾ ಮೇಲೆ ಸಂಶಯ ವ್ಯಕ್ತಪಡಿಸಿದರು. ಇದರ ನಡುವೆ ಮನೆಯಲ್ಲಿದ್ದ ಟೈಲ್ಸ್ ಅನ್ನು ತೆಗೆದು ಮತ್ತೆ ಅಳವಡಿಸಿರುವುದನ್ನು ಗಮನಿಸಿದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದಾಗ, ಅವರು ಬಂದು ಟೈಲ್ಸ್ ತೆಗೆದು ನೋಡಿದಂತಹ ಸಂದರ್ಭದಲ್ಲಿ ವಿಜಯ್ ಚೌಹಾಣ್ ಅವರ ಶವ ಪತ್ತೆಯಾಗಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಕೋಮಲಾ ಮತ್ತು ಮೋನು ಶರ್ಮಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net