ಗಂಡನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಖತರ್ನಾಕ್ ಹೆಂಡ್ತಿಯ ಸಿಟ್ಟಿಗೆ ಪತಿಯ ಡಬಲ್​ಗೇಮ್​ ಕಾರಣ!

Husband
Published on

ಬೆಂಗಳೂರು: ಬೇರೆ ಮಹಿಳೆಯನ್ನು ಮದುವೆಯಾಗಿದ್ದಕ್ಕೆ ಬುದ್ಧಿ ಕಲಿಸಲೆಂದೇ ಮೊದಲನೇ ಪತ್ನಿಯೊಬ್ಬಳು ಗಂಡನನ್ನೇ ಅಪಹರಿಸಿ ಎರಡನೇ ಪತ್ನಿಯ ಬಳಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.

ಆರೋಪಿ ರೋಮಾ ಶೇಕ್ ಪತಿ ಶಾಹಿದ್ ಶೇಕ್ ಎಂಬಾತ ರತ್ನ ಕಾತೂನ್ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದಾನೆ. ಇದು ಮೊದಲ ಪತ್ನಿಯ ಕೋಪಕ್ಕೆ ಕಾರಣವಾಗಿದ್ದು, ಪತಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂಬ ಹಠಕ್ಕೆ ಬಿದ್ದು, ರಾತ್ರೋ ರಾತ್ರಿ ಸಂಚು ರೂಪಿಸಿ, ಹಾಡಹಗಲೇ ಸಿನಿಮೀಯ ಶೈಲಿಯಲ್ಲಿ ಗಂಡನನ್ನೇ ಅಪಹರಿಸಿದ್ದಾಳೆ. ಇದನ್ನೂ ಓದಿ: ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿದೆ ಉತ್ತರ

ನಾಲ್ಕು ಜನರಿಗೆ ಮೊದಲೇ ಸುಪಾರಿ ನೀಡಿ ಜೂನ್ 7ರಂದು ಮಾವಿನ ಹಣ್ಣು ಖರೀದಿಸುತ್ತಿದ್ದ ಶಾಹಿದ್​ನನ್ನು ಮಟಮಟ ಮಧ್ಯಾಹ್ನವೇ ಅಪಹರಿಸಿ, ಎರಡನೇ ಪತ್ನಿ ಬಳಿ 20 ಲಕ್ಷ ರೂ.ಗೆ ರೋಮಾ ಶೇಕ್​ ಬೇಡಿಕೆ ಇಟ್ಟಿದ್ದಳು.

ಇತ್ತ ಗಂಡನನ್ನು ಕಾಣದೆ ಕಂಗಾಲಾಗಿರುವ ಎರಡನೇ ಪತ್ನಿ ರತ್ನ ಕಾತೂನ್ ಬಾಗಲಗುಂಟೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಳು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅಭಿಷೇಕ್​ (26), ಭರತ್​ (25), ಪ್ರಕಾಶ ಕೆ.ಪಿ. (22) ಹಾಗೂ ಚಲುವ ಮೂರ್ತಿ (22) ಎಂಬುವರನ್ನು ಕಿಡ್ನಾಪ್​ ಮಾಡಲು ಸಹಕರಿಸಿದ ಆರೋಪದಲ್ಲಿ ಬಂಧಿಸಲಾಗಿದ್ದು, ಅಪಹರಣಕ್ಕೊಳಗಾದ ಶಾಹೀದ್​ ಶೇಕ್​ನನ್ನು ರಕ್ಷಿಸಲಾಗಿದೆ.

ರೋಮ ಶೇಕ್​ ಬಳಿಯಿದ್ದ ಆಭರಣಗಳನ್ನು ತೆಗೆದುಕೊಂಡು ಹೋಗಿ ಎರಡನೇ ಪತ್ನಿಯೊಂದಿಗೆ ಇದ್ದಿದ್ದಕ್ಕೆ, ದ್ವೇಷದಿಂದ ಮೊದಲನೇ ಪತ್ನಿ ಕಿಡ್ನಾಪ್​ ಮಾಡಿಸಿದ್ದಾಳೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net