

ಬೀಜಿಂಗ್: ತನಗೆ ಬಂದ ಪಾರ್ಸೆಲ್ ಅನ್ನು ತೆರೆಯಲು ಮರೆತ ಚೀನಾ ಮಹಿಳೆಯೊಬ್ಬಳು ಸುಮಾರು 11 ದಿನಗಳ ಬಳಿಕ ಅದನ್ನು ಮರಳಿ ನೋಡಿದಾಗ ಆಕೆಗೆ ಆಶ್ಚರ್ಯವೊಂದು ಕಾದಿತ್ತು.
ಅಷ್ಟಕ್ಕೂ 11 ದಿನಗಳ ಬಳಿಕ ಪಾರ್ಸೆಲ್ನಲ್ಲಿ ಆಗಿದ್ದ ಬದಲಾವಣೆಯೆಂದರೆ ಅದರ ಮೇಲಿನ ಮೂಲೆಯೊಂದರಲ್ಲಿ ಚಿಕ್ಕ ಚಿಕ್ಕ ಅಣಬೆಗಳು ಬೆಳೆದು ನಿಂತಿದ್ದವು. ಅಣಬೆ ನೋಡಿದ ಮಹಿಳೆಗೆ ಅಚ್ಚರಿಯಾಗುವುದರ ಜತೆಗೆ ಉಪಯೋಗವು ಆಗಿದೆ.
ಘಟನೆಯ ಸಂಪೂರ್ಣ ವಿವರಣೆಗೆ ಬರುವುದಾದರೆ, ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಲಾಂಗ್ಚಾಂಗ್ ನಗರದ ನಿವಾಸಿ ದೈ, ಒಂದು ಬಾಕ್ಸ್ ತುಂಬ ಹೂವಿನ ಗೊಬ್ಬರವನ್ನು ಆನ್ಲೈನ್ ಮೂಲಕ ಖರೀದಿಸಿದ್ದಳು. ನಿಗದಿಯಂತೆ ಪಾರ್ಸೆಲ್ ಡಿಲಿವರಿಯೂ ಆಗಿತ್ತು. ಆದರೆ, ಅದನ್ನು ತೆರೆಯಲು ಆಕೆ ಮರೆತಿದ್ದಳು. 11 ದಿನಗಳ ಬಳಿಕ ನೆನಪಾಗಿ ತೆರೆಯಲು ಪಾರ್ಸೆಲ್ ಹುಡುಕಾಡಿ ನೋಡಿದಾಗ ಪತ್ತೆಯಾದ ಪಾರ್ಸೆಲ್ನ ಒಂದು ಮೂಲೆಯಲ್ಲಿ ಅಣಬೆಗಳು ಬೆಳೆದಿದ್ದವು.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಅ. 15ರಂದು ಚೀನಾ ಮಾಧ್ಯಮದಲ್ಲಿ ಬಿಡುಗಡೆಯಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ. ಅನಿರೀಕ್ಷಿತ ಪ್ರಸಂಗದ ಬಗ್ಗೆ ಮಾತನಾಡಿರುವ ದೈ, ಪಾರ್ಸೆಲ್ ಮೇಲೆ ಬೆಳೆದಿದ್ದ ಅಣಬೆಗಳನ್ನು ರುಚಿಯಾದ ಸೂಪ್ ಮಾಡಿ ಸೇವಿಸಿಬಿಟ್ಟೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್)