ನನ್ನೊಂದಿಗೆ ಬರ್ತಿಯಾ... 7 ವರ್ಷದ ಬಾಲಕನಿಂದ ಇದೆಂಥಾ ಮಾತು! ಸಂಚಲನ ಮೂಡಿಸಿದ ಯುವತಿಯ ವಿಡಿಯೋ | Harassment

Harassment
Published on

Harassment : ತಾನು ವಾಸವಿದ್ದ ವಸತಿ ಸಮುದಾಯದಲ್ಲಿ ಯುವತಿಯೊಬ್ಬಳು ನಡೆದಾಡುವಾಗ 7 ವರ್ಷದ ಬಾಲಕ ಆಕೆಯನ್ನು ಚುಡಾಯಿಸಿರುವ ಕಳವಳಕಾರಿ ಘಟನೆ ನಡೆದಿದೆ. ಈ ಕುರಿತು  ಮಾತನಾಡಿರುವ ವಿಡಿಯೋವನ್ನು ಯುವತಿ ತನ್ನ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಆ ಬಾಲಕ, ಯುವತಿಯನ್ನು ನೋಡಿ "ಓ ಲಾಲ್ ಪರಿ" ಎಂದು ಕಾಮೆಂಟ್​ ಮಾಡಿದ್ದಾನೆ. ಅಂದಹಾಗೆ, "ಓ ಲಾಲ್ ಪರಿ" ಎಂಬುದು ಒಂದು ಹಿಂದಿ ಪದ. ಇದನ್ನು ವಿವಿಧ ಸಂದರ್ಭಗಳಲ್ಲಿ ಉಲ್ಲೇಖಿಸಬಹುದು. ಕೆಂಪು ವೈನ್, ಓ ಕೆಂಪು ದೇವತೆ ಹಾಗೂ ಜನಪ್ರಿಯ ಮಾದಕ ವಸ್ತು ಸೇರಿದಂತೆ ಮುಂತಾದ ರೂಪಕ ಅರ್ಥದಲ್ಲಿ ಬಳಸಬಹುದು.

ಯುವತಿ ಹೇಳಿದಂತೆ ಆಕೆ ಬಿಳಿ ಬಣ್ಣದ ಉದ್ದನೆಯ ಸ್ಕರ್ಟ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿದ್ದಳು. ಆಕೆಯನ್ನು ನೋಡಿ ಹುಡುಗ ಓ ಲಾಲ್​ ಪರಿ ಎಂದು ಕರೆದಾಗ ಆರಂಭದಲ್ಲಿ ಆಕೆ ಆಶ್ಚರ್ಯಚಕಿತಳಾದಳು. ಅಲ್ಲದೆ, ಆ ಸಮಯದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂದು ಆಕೆಗೆ ತಿಳಿಯಲಿಲ್ಲ. ಆ ಹುಡುಗ ಹೇಳಿದ ಪದವನ್ನು ಕೇಳಿ, ಸೊಸೈಟಿಯ ಸೆಕ್ಯುರಿಟಿ ಗಾರ್ಡ್​ ನಗುತ್ತಿರುವುದನ್ನು ನೋಡಿದಾಗ ಆಕೆಯ ಮನಸ್ಸು ಇನ್ನಷ್ಟು ನೊಂದಿತು. ಆದ್ದರಿಂದ ಆಕೆ ಆ ಹುಡುಗನನ್ನು ಪ್ರಶ್ನಿಸದೇ ಸುಮ್ಮನಾದಳು. ಆಕೆ ಮತ್ತೆ ಹುಡುಗನ ಪಕ್ಕದಲ್ಲಿ ಹಾದುಹೋದಾಗ, ಅವನು "ಕೋನ್ ಹೈ ತು, ಚಲೇಗಿ ಕ್ಯಾ? (ಯಾರು ನೀನು? ನೀನು ನನ್ನೊಂದಿಗೆ ಬರುತ್ತೀಯಾ?) ಎಂದು ಕೂಗಿದನು.

ಬಾಲಕನ ಆ ಮಾತುಗಳನ್ನು ಕೇಳಿದ ನಂತರ ಆ ಯುವತಿ ತಾಳ್ಮೆ ತಪ್ಪಿತು ಮತ್ತು ಬಾಲಕನ ಬಳಿ ಹೋಗಿ ತರಾಟೆಗೆ ತೆಗೆದುಕೊಂಡಳು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸೆಕ್ಯುರಿಟಿ ಗಾರ್ಡ್, ಕ್ಷಮೆಯಾಚಿಸುವಂತೆ ಆ ಬಾಲಕನಿಗೆ ಸೂಚಿಸಿದರು. ಈ ವೇಳೆ ಆ ಬಾಲಕ "ಕ್ಷಮಿಸಿ" ಎಂದು ಹೇಳಿ, ಅಲ್ಲಿಂದ ಓಡಿಹೋದನು.

ಈ ಘಟನೆ ಯುವತಿಯನ್ನು ಚಿಂತಿಸುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿ ತನ್ನ ಅಭಿಪ್ರಾಯವನ್ನು ಹೊರಹಾಕಿದ್ದಾಳೆ. ನನ್ನದೇ ವಸತಿ ಸಮುದಾಯದಲ್ಲಿ ನಾನು ನಡೆದುಕೊಂಡು ಹೋಗುತ್ತಿದ್ದಾಗ, 6 ರಿಂದ 7 ವರ್ಷದ ಬಾಲಕನೊಬ್ಬ ನನ್ನನ್ನು ಓ ಲಾಲ್ ಪರಿ, ಚಲೇಗಿ ಕ್ಯಾ? ಎಂದು ಕರೆದನು. ಇಂದು ಬೀದಿ ಬೀದಿಗಳಲ್ಲಿ ಕೆಲವು ಪೊರ್ಕಿಗಳು ಮಹಿಳೆಯರಿಗೆ ಕಿರುಕುಳ ನೀಡಲು ಬಳಸುವ ಅನೇಕ ಪದಗಳಲ್ಲಿ ಇವು ಕೂಡ ಒಂದು. ಬಾಲಕ ಆ ಪದವನ್ನಾಡಿದಾಗ ಸೆಕ್ಯುರಿಟಿ ಗಾರ್ಡ್​ ಸೇರಿದಂತೆ ಸುತ್ತಮುತ್ತಲಿನ ಎಲ್ಲರು ನಕ್ಕರು. ಆದರೆ, ಅದು ನನಗೆ ತಮಾಷೆಯಾಗಿ ಕಾಣಲಿಲ್ಲ. ಏಕೆಂದರೆ, ಇದು ಪ್ರಾರಂಭವಾಗುವುದೇ ಇಲ್ಲಿಂದ. ಒಂದು ಮಗು ಅಂತಹ ಪದಗಳನ್ನು ಹೇಳುವುದು, ಅವನು ಆ ಪದಗಳನ್ನು ಕೇಳಿದಾಗ ಮತ್ತು ನೋಡಿದಾಗ. ಬಳಿಕ ಆ ಪದಗಳನ್ನು ಆತ ನಕಲಿಸುತ್ತಾನೆ. ಸರಿಪಡಿಸದಿದ್ದರೆ, ಮಸ್ತಿಗೆ ಆಡಿದ ಈ ಪದ ಮುಂದೊಂದು ದಿನ ಕಿರುಕುಳವಾಗುತ್ತದೆ ಎಂದು ಯುವತಿ ಕಿರಣ್ ಗ್ರೆವಾಲ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡು ಬರೆದಿದ್ದಾರೆ.

ಮಧ್ಯ ಪ್ರವೇಶ ಮಾಡಿದ ಸೆಕ್ಯುರಿಟಿ ಗಾರ್ಡ್​, ಆ ಬಾಲಕನ ಉತ್ತಮ ಕುಟುಂಬ ಹಿನ್ನೆಲೆಯನ್ನು ಹೇಳುವ ಮೂಲಕ ಆತ ದುರುದ್ದೇಶದಿಂದ ಆ ಮಾತನ್ನು ಆಡಿಲ್ಲ, ಕೇವಲ ತಮಾಷೆ ಮಾಡುತ್ತಿದ್ದಾನೆ ಎನ್ನುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ, ಈ ತರ್ಕವು ನನ್ನನ್ನು ಮತ್ತಷ್ಟು ನಿರಾಶೆಗೊಳಿಸಿತು. ಇಂದು ನಾವು ಆ ಬಾಲಕನಿಗೆ ಸರಿಯಾಗಿ ತಿಳಿ ಹೇಳದಿದ್ದರೆ ಮುಂದೊಂದು ದಿನ ಅದು ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದು ಕಿರಣ್​ ಅವರ ವಾದ.

ಅಂದಹಾಗೆ, ಕಿರಣ್​ ಅಪ್​ಲೋಡ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ಭಾರತದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಪಾಲಕರ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಘಟನೆಯ ಬಗ್ಗೆ ತಿಳಿದು ನಿಜಕ್ಕೂ ಆಘಾತವಾಗಿದ ಎಂದು ಅನೇಕರು ಹೇಳಿಕೊಂಡಿದ್ದಾರೆ. ಪಾಲಕರು ತಮ್ಮ ಮಕ್ಕಳ ಮೇಲೆ ಸರಿಯಾಗಿ ಗಮನ ವಹಿಸಬೇಕು ಮತ್ತು ಅವರಿಗೆ ಸರಿ-ತಪ್ಪುಗಳನ್ನು ಹೇಳಿಕೊಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಇದೊಂದು ಕೆಟ್ಟ ಸಮಾಜ. ಕೆಟ್ಟ ಪಾಲನೆ. ನಿಮ್ಮ ಬಗ್ಗೆ ವಿಷಾದವಿದೆ ಎಂದು ಕೆಲ ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದು, ಈ ಒಂದು ವಿಡಿಯೋ ಅನೇಕರನ್ನು ಚರ್ಚೆಗೆ ದೂಡಿದೆ. ಈ ವಿಡಿಯೋ ಬಗ್ಗೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net