

ನವದೆಹಲಿ: ಮೊನ್ನೆಮೊನ್ನೆಯಷ್ಟೇ ಅಲ್ಹಾನನ್ನು ಮೆಚ್ಚಿಸಲು ಆರು ವರ್ಷದ ಮಗನನ್ನು ತಾಯಿಯೊಬ್ಬಳು ಭೀಕರವಾಗಿ ಕೊಂದಿರುವುದು ವರದಿಯಾಗಿತ್ತು. ಇದೀಗ ಮಹಿಳೆಯೊಬ್ಬಳು ಶಿವನನ್ನು ಮೆಚ್ಚಿಸುವ ಸಲುವಾಗಿ ಮನೆ ಮುಂದೆಯೇ ಜೀವಂತ ಸಮಾಧಿಯಾಗಲು ಯತ್ನಿಸಿದ ಪ್ರಕರಣವೊಂದು ವರದಿಯಾಗಿದೆ.
ಉತ್ತರಪ್ರದೇಶದ ಘಟಮ್ಪುರದ ಸಜೇಟಿ ಎಂಬಲ್ಲಿನ 50 ವರ್ಷದ ಮಹಿಳೆ ಗೋಮತಿ ದೇವಿ ಎಂಬಾಕೆ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದರು. ಈಕೆಯ ಪತಿ ರಾಮ್ ಸಜೀವನ್ ಶಿವಭಕ್ತನಾಗಿದ್ದು, ಕನಸಿನಲ್ಲಿ ತನಗೆ ಶಿವ ಪ್ರತ್ಯಕ್ಷನಾಗಿ ದರ್ಶನ ನೀಡಿದ್ದಾನೆ ಎಂದು ಬುಧವಾರ ಬೆಳಗ್ಗೆ ಗೋಮತಿ ದೇವಿ ಕೆಲವರಲ್ಲಿ ಹೇಳಿಕೊಂಡಿದ್ದರು. ಮಾರನೆಯ ದಿನ ಎಂದರೆ ಇಂದು ಬೆಳಗ್ಗೆ ತನ್ನ ಮನೆ ಮುಂದೆ ಗುಂಡಿ ತೆಗೆಸಿದ್ದ ಗೋಮತಿ, ತನ್ನನ್ನು ಜೀವಂತ ಹೂತು ಬಿಡುವಂತೆ ಮನೆಯವರಲ್ಲಿ ಕೋರಿಕೊಂಡಿದ್ದರು.
ಮನೆಯವರು ಭಜನ್-ಕೀರ್ತನ್ ಮೂಲಕ ಈಕೆಯನ್ನು ಸಮಾಧಿ ಮಾಡಲು ಮುಂದಾಗಿದ್ದರು. ಸ್ಥಳೀಯರನೇಕರು ಕೂಡ ಇದಕ್ಕೆ ಕೈಜೋಡಿಸಿದ್ದರು. ಗುಂಡಿಯಲ್ಲಿ ಮಂಚ ಇಟ್ಟು ಅದರ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತ ಗೋಮತಿ ಮೇಲೆ ಜನರು ಭಜನ್-ಕೀರ್ತನ್ ಜತೆಗೆ ಹೂವಿನ ದಳಗಳನ್ನು ಸುರುವಿ ಮಣ್ಣು ಹಾಕಿ ಸಮಾಧಿ ಮಾಡಲು ಮುಂದಾಗಿದ್ದರು. ಇದನ್ನು ನೋಡಿ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಗೋಮತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ವಲ್ಪ ಅಸ್ವಸ್ಥಗೊಂಡಿರುವ ಗೋಮತಿಗೆ ಚಿಕಿತ್ಸೆ ನಡೆಸಲಾಗುತ್ತಿದ್ದು, ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)