

ವಾಷಿಂಗ್ಟನ್: ಮಹಿಳೆಯೊಬ್ಬರು ಎರಡು ಗರ್ಭಾಶಯಗಳಿಂದ 20 ಗಂಟೆ ಅಂತರದಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಅಮೆರಿಕದ ಅಲಬಾಮಾದಲ್ಲಿ ನಡೆದಿದೆ. ಇದು ವೈದ್ಯರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ.
ಕೆಲ್ಸಿ ಹ್ಯಾಚರ್ (32) ಎಂಬ ಮಹಿಳೆ 20 ಗಂಟೆಗಳ ಹೆರಿಗೆ ನೋವಿನ ನಂತರ ಎರಡು ಆರೋಗ್ಯವಂತ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಡಿ.19ರಂದು ಮಂಗಳವಾರ ಸಂಜೆ ತನ್ನ ಮೊದಲ ಮಗು ರಾಕ್ಸಿ ಲೈಲಾಗೆ, ಡಿ. 20ರ ಬೆಳಗ್ಗೆ ಎರಡನೇ ಮಗು ರೆಬೆಲ್ ಲೆಕಾನ್ಗೆ ಜನ್ಮ ನೀಡಿದ್ದಾರೆ.
ಕೆಲ್ಸಿ ಈಗಾಗಲೇ ಮೂರು ಮಕ್ಕಳ ತಾಯಿ. ಆಶ್ಚರ್ಯ ವೆಂದರೆ ಈ ಮೊದಲು ಎರಡೂ ಗರ್ಭಾಶಯಗಳಿಂದ ಗರ್ಭಿಣಿಯಾಗಿರಲಿಲ್ಲ. ಆಕೆಯ ಗರ್ಭಾವಸ್ಥೆ ಬಹಳ ಅಪರೂಪವಾಗಿದ್ದು, ದೊಡ್ಡ ಅಪಾಯಕ್ಕೀಡಾಗಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ತಾಯಿ ಮತ್ತು ಮಕ್ಕಳ ಆರೋಗ್ಯ ಸಹಜ ಸ್ಥಿತಿಯಲ್ಲಿದ್ದು, ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ. ಈ ರೀತಿಯ ಗರ್ಭಧಾರಣೆ ಮತ್ತು ಜನನವನ್ನು ನಾವು ಯೋಚಿಸಿರಲಿಲ್ಲ. ಆದರೆ ಎರಡೂ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಈ ಜಗತ್ತಿಗೆ ಕರೆತರುವುದು ನಮ್ಮ ಕನಸಾಗಿತ್ತು ಎಂದು ಕೆಲ್ಸಿ ಹೇಳಿದ್ದಾರೆ.
ಅತಿವಿರಳ ಜನ್ಮಜಾತ ಸಮಸ್ಯೆ
ಕೆಲ್ಸಿ ಹ್ಯಾಚರ್ 17ರ ವಯಸ್ಸಿನಲ್ಲಿ ಇದ್ದಾಗಲೇ ಅವರಲ್ಲಿ ಎರಡು ಗರ್ಭಾಶಯ ಇರುವುದನ್ನು ಗುರುತಿಸಲಾಗಿತ್ತು, ಇದನ್ನು ಯುಟಿರಸ್ ಡಿಡೆಲ್ಪಿಸ್ ಎಂದು ಕರೆಯುತ್ತಾರೆ. ಇದು ಅಪರೂಪದ ಜನ್ಮಜಾತ ಸಮಸ್ಯೆಯಾಗಿದ್ದು, 50 ದಶಲಕ್ಷ ಮಹಿಳೆಯರ ಪೈಕಿ ಒಬ್ಬರಲ್ಲಿ ಮಾತ್ರ ಇರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಸಾಕುನಾಯಿ ಬೊಗಳಿದ್ದಕ್ಕೆ ಮಹಿಳೆಯ ಕೊಲೆ
ಭೋಪಾಲ್: ಸಾಕುನಾಯಿಯು ಎಡೆಬಿಡದೆ ಬೊಗಳಿದ್ದಕ್ಕಾಗಿ ನಡೆದ ಜಗಳದಲ್ಲಿ 35 ವರ್ಷದ ವ್ಯಕ್ತಿಯೊಬ್ಬ 65 ವರ್ಷದ ಮಹಿಳೆಯನ್ನು ಕೊಂದಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ವ್ಯಕ್ತಿಯು ಶನಿವಾರ ರಾತ್ರಿ 10.30ರ ಸುಮಾರಿಗೆ ಅಂಗಡಿ ಮುಚ್ಚಿ, ಮನೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ನಾಯಿ ಬೊಗಳುತ್ತಲೇ ಇತ್ತು. ಇದರಿಂದಾಗಿ ರಸ್ತೆ ದಾಟಲು ಸಾಧ್ಯವಾಗದಿದ್ದಾಗ ಆತ ಕೂಗಾಡಿದ್ದಾನೆ. ಕೂಡಲೇ ನಾಯಿಯ ಮಾಲಕಿ ಮನೆಯಿಂದ ಹೊರ ಬಂದಿದ್ದಾರೆ. ಇಬ್ಬರ ಮಧ್ಯೆ ಜಗಳ ನಡೆದಿದೆ. ಕೋಪದಲ್ಲಿ ಆ ವ್ಯಕ್ತಿಯು ಮಹಿಳೆಯ ಹೊಟ್ಟೆಗೆ ಒದ್ದ ಕಾರಣ ಆಕೆ ರಸ್ತೆಗೆ ಬಿದ್ದಿದ್ದಾಳೆ. ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.