

ಬೆಂಗಳೂರು: ಮಂಗಳೂರಿನ ವೈದ್ಯರೊಬ್ಬರು ತಮ್ಮ ಮಹಿಳಾ ರೋಗಿ ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಫೋಟೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಟ್ವೀಟ್ನಲ್ಲಿ ಏನಿದೆ?: ಅಲಂಕಾರಗೊಂಡ ದೇವರ ಮಂಟಪ, ಕೃಷ್ಣನ ಮುಂದೆ ಅಚ್ಚುಕಟ್ಟಾಗಿ ಇರಿಸಿದ 88 ಬಗೆಯ ತಿನಿಸುಗಳು, ಮಧ್ಯೆ ಭಕ್ತೆ ಕುಳಿತಿರುವ ಫೋಟೋಗಳನ್ನು ಹಂಚಿಕೊಂಡಿರುವ ಜತೆಗೆ ‘ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯ ಬಗ್ಗೆ ಹೆಮ್ಮೆಯಿದೆ. ಅವರು ನನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವವರು. ಅವರು ಈ ಹಿಂದಿನ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ. ಗೋಕುಲಾಷ್ಟಮಿ ಹಿನ್ನೆಲೆಯಲ್ಲಿ ಅವರು ಬುಧವಾರ ರಾತ್ರಿ 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಟ್ವೀಟ್ ವೈರಲ್ ಆಗಿದೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ ಡಾ.ಪದ್ಮನಾಭ್ ಕಾಮತ್ ಅವರು ತಮ್ಮ ರೋಗಿಯೊಬ್ಬರು ತಯಾರಿಸಿದ 88 ಬಗೆಯ ಖಾದ್ಯ ಗಳ ಫೋಟೋವೊಂದನ್ನು ಟ್ವಿಟರ್ನಲ್ಲಿ ಹಾಕಿದ್ದಾರೆ.
ದೇಶಾದ್ಯಂತ ಸೆಪ್ಟೆಂಬರ್ 7 ರಂದು ಜನ್ಮಾಷ್ಟಮಿ ಆಚರಿಸಲಾಗಿದೆ. ಶ್ರೀಕೃಷ್ಣನ ಜನ್ಮದಿನವೆಂದು ಕರೆಯಲ್ಪಡುವ ಈ ದಿನವನ್ನು ಭಕ್ತರು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಕೃಷ್ಣನ ವಿಗ್ರಹಕ್ಕೆ ಸುಂದರವಾದ ಹೊಸ ಬಟ್ಟೆಗಳನ್ನು ತೊಡಿಸುತ್ತಾರೆ ಮತ್ತು ಬಾಲ್ಯದಲ್ಲಿ ಕೃಷ್ಣಗೆ ಇಷ್ಟವಾದ ಕೆಲವು ಅದ್ಭುತ ಭಕ್ಷ್ಯಗಳನ್ನು ಬಡಿಸುತ್ತಾರೆ. ಕೆಲವರು ವ್ರತವನ್ನು ಆಚರಿಸುತ್ತಾರೆ ಅಥವಾ ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡುತ್ತಾರೆ. ಮಂಗಳೂರಿನ ಮಹಿಳೆಯೊಬ್ಬರು ಜನ್ಮಾಷ್ಟಮಿಯಂದು ಹಿಂದೆಂದೂ ಕಾಣದ ರೀತಿಯಲ್ಲಿ ಭಕ್ತಿಭಾವ ಮೆರೆದಿದ್ದಾರೆ.