

ಶ್ರೀನಗರ: ತೊಟ್ಟಿಲು ತೂಗುವ ಕೈ ಲೋಕವನ್ನೇ ಆಳಬಹುದು ಎನ್ನುತ್ತಾರೆ. ಪೂರ್ತಿ ಕುಟುಂಬದ ಜವಾಬ್ದಾರಿ ಹೊರುವ ಶಕ್ತಿ ಹೆಣ್ಣಿಗಿದ್ದೇ ಇದೆ. ಕೆಲಸ ಕಳೆದುಕೊಂಡ ಅಪ್ಪನನ್ನು ಕಂಡು ತಾನೇ ಆಟೋ ಡ್ರೈವರ್ ಸೀಟಲ್ಲಿ ಕುಳಿತು ಜೀವನದ ಬಂಡಿ ಸಾಗಿಸುತ್ತಿರುವ ಯುವತಿಯ ಕಥೆ ಇದು.
ಜಮ್ಮು ಕಾಶ್ಮೀರದಲ್ಲಿ ದ್ವಿತೀಯ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ ಬಂಜೀತ್ ಕೌರ್ (21) ತಂದೆ ಶಾಲೆಯ ಬಸ್ಸೊಂದಕ್ಕೆ ಚಾಲಕನಾಗಿ ಕೆಲಸ ಮಾಡುತ್ತಿದ್ದನಂತೆ. ಆದರೆ ಕರೊನಾ ಲಾಕ್ಡೌನ್ ಬಂದ ನಂತರ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಆಟೋ ತೆಗೆದುಕೊಂಡು ಅದರ ಚಾಲಕನಾಗಿ ಕೆಲಸ ಮಾಡಲಾರಂಭಿಸಿದನಾದರೂ ಅದು ಆತನಿಂದ ಸಾಧ್ಯವಾಗಲಿಲ್ಲವಂತೆ. ಇದನ್ನೆಲ್ಲ ನೋಡಿದ ಬಂಜೀತ್ ತಾನು ಆಟೋ ಕಲಿಯುವ ಹಠ ಕಟ್ಟಿ, ಅಪ್ಪನ ಸಹಾಯದಿಂದ ಆಟೋ ಓಡಿಸುವುದು ಕಲಿತಿದ್ದಾಳೆ. ನಂತರ ಅದನ್ನೇ ತನ್ನ ಕೆಲಸವನ್ನಾಗಿಸಿಕೊಂಡು ಜೀವನ ಆರಂಭಿಸಿದ್ದಾಳೆ. ಇದೀಗ ಪೂರ್ತಿ ಕುಟುಂಬದ ಆರ್ಥಿಕತೆಯನ್ನು ಆಕೆಯೇ ನೋಡಿಕೊಳ್ಳುತ್ತಿದ್ದಾಳಂತೆ.
ನಾವು ಹೆಣ್ಣು ಮಕ್ಕಳು ಏನನ್ನಾದರೂ ಮಾಡಬಲ್ಲವೆ. ಅದರೆ ನಮ್ಮ ಗಡಿಯನ್ನು ದಾಟಿ ಯೋಚನೆ ಮಾಡುವ ಸಾಮರ್ಥ್ಯ ನಮಗಿರಬೇಕಷ್ಟೇ ಎನ್ನುತ್ತಾರೆ ಬಂಜೀತ್. ನನ್ನ ಮಗಳು ಆಟೋ ಕಲಿಸಿಕೊಡಿ ಎಂದಾಗ ಮುಂದೆ ಆಕೆಯೇ ನಮ್ಮ ಕುಟುಂಬಕ್ಕೆ ಆಧಾರವಾಗುತ್ತಾಳೆ ಎನ್ನುವ ನಂಬಿಕೆ ನನಗಿರಲಿಲ್ಲ. ಆದರೆ ಈಗ ಅವಳನ್ನು ನೋಡಿದರೆ ಹೆಮ್ಮೆಯಾಗುತ್ತದೆ ಎನ್ನುತ್ತಾರೆ ಆಕೆಯ ತಂದೆ. ಕೇವಲ ಕುಟುಂಬಸ್ಥರು ಮಾತ್ರವಲ್ಲದೆ ಪೂರ್ತಿ ರಾಜ್ಯವೇ ಬಂಜೀತ್ಳನ್ನು ಹೆಮ್ಮೆಯಿಂದ ನೋಡಲಾರಂಭಿಸಿದೆ. (ಏಜೆನ್ಸೀಸ್)