'ರಾಮ ಮಂದಿರಕ್ಕೆ ನನ್ನೆಲ್ಲ ಆಭರಣ ಅರ್ಪಿಸಿ' ಹೆಂಡತಿಯ ಕೊನೆಯಾಸೆ ನೆರವೇರಿಸಿದ ಗಂಡ

gold
Published on

ಜೋಧಪುರ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ ದೇಶ ವಿದೇಶಗಳಿಂದ ದಾನಿಗಳು ದಾನ ಮಾಡಲಾರಂಭಿಸಿದ್ದಾರೆ. ಆದರೆ ರಾಜಸ್ಥಾನದ ಈ ಮಹಿಳೆಯ ರಾಮ ಭಕ್ತಿಯನ್ನು ಕೇಳಿದರೆ ನೀವು ಹುಬ್ಬೇರಿಸುತ್ತೀರಿ.

ಜೋಧಪುರ ನಿವಾಸಿ ವಿಜಯ್​ ಅವರ ಪತ್ನಿ ಅನಿತ ಫೆಬ್ರವರಿ 4ರಂದು ಕೊನೆಯುಸಿರೆಳೆದಿದ್ದಾರೆ. ಸಾಯುವುದಕ್ಕು ಮೊದಲು ಆಕೆ ಗಂಡ ಮತ್ತು ಮಗನ ಬಳಿ ತನ್ನ ಕೊನೆಯ ಆಸೆಯನ್ನು ಹೇಳಿಕೊಂಡಿದ್ದಾಳೆ. ನನ್ನ ಎಲ್ಲ ಆಭರಣವನ್ನು ಶ್ರೀ ರಾಮನ ಮಂದಿರಕ್ಕೆ ಅರ್ಪಿಸಿಬಿಡಿ. ಇದೇ ನನ್ನ ಕೊನೆಯ ಆಸೆಯೆಂದು ಹೇಳಿದ್ದಾಳೆ. ನಿನಗೇನೂ ಆಗುವುದಿಲ್ಲ ಎಂದು ಅವರಿಬ್ಬರು ಆಕೆಗೆ ಸಮಾಧಾನ ಮಾಡಿದ್ದಾರೆ.

ಫೆಬ್ರವರಿ 4ರಂದು ಅನಿತಾ ಅಸು ನೀಗಿದ ತಕ್ಷಣ ಆಕೆಯ ಗಂಡ ನಿಧಿ ಸಂಗ್ರಹಿಸುತ್ತಿದ್ದ ಹೇಮಂತ್​ ಹೆಸರಿನ ವ್ಯಕ್ತಿಗೆ ಕರೆ ಮಾಡಿದ್ದಾರೆ. ನನ್ನ ಪತ್ನಿಯ ಕೊನೆಯ ಆಸೆಯದು. ಇದೀಗ ಆಕೆ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ದಯವಿಟ್ಟು ಬಂದು ಆಕೆಯ ಆಭರಣವನ್ನು ತೆಗೆದುಕೊಂಡು ಹೋಗಿ ಎಂದು ಕೇಳಿಕೊಂಡಿದ್ದಾರೆ. ನೀವು ನಿಮ್ಮ ಹೆಂಡತಿಯ ಅಂತ್ಯಕ್ರಿಯೆ ಮುಗಿಸಿ, ನಂತರ ನಾವು ಬರುತ್ತೇವೆ ಎಂದು ಹೇಳಿ ಅವರು ಫೋನ್​ ಕಟ್​ ಮಾಡಿದ್ದಾರೆ.

ನಿಧಿ ಸಂಗ್ರಹ ಅಭಿಯಾನದ ನಿಯಮದ ಪ್ರಕಾರ ಬಂಗಾರವನ್ನು ತೆಗೆದುಕೊಳ್ಳುವಂತಿಲ್ಲ ಎಂದು ಕುಟುಂಬಕ್ಕೆ ತಿಳಿಸಲಾಗಿದೆ. ಅದಾದ ನಂತರ ಅವರು ಆಕೆಯ 15 ತೊಲ ಬಂಗಾರ ಮತ್ತು 23 ಗ್ರಾಂ ಚಿನ್ನವನ್ನು ಮಾರಾಟ ಮಾಡಲಾಗಿದೆ. ಅದರಿಂದ ಬಂದ 7,08,521 ರೂಪಾಯಿಯನ್ನು ನಿಧಿ ಸಂಗ್ರಹಕಾರರಿಗೆ ಕೊಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net