ಮುಂಬೈನಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡುವಾಗಲೇ ವೈದ್ಯೆ ಮೇಲೆ ಹಲ್ಲೆ!

doctor
Published on

ಮುಂಬೈ: ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಹತ್ಯೆ ಘಟನೆ ದೇಶಾದ್ಯಂತ ಆತಂಕ ಮೂಡಿಸಿರುವ ಬೆನ್ನಲ್ಲೇ ಮುಂಬೈನಲ್ಲಿ ವೈದ್ಯೆ ಮೇಲೆ ರೋಗಿ ಮತ್ತು ಆತನ ಕಡೆಯವರಿಂದ ಮಾರಣಾಂತಿಕ ಹಲ್ಲೆ ನಡೆದಿದೆ.

ಮುಂಬೈನ ಸಿಯಾನ್ ಆಸ್ಪತ್ರೆಗೆ ಭಾನುವಾರ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಬಂದಿದ್ದು, ಇಎನ್‌ಟಿ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಆಗ ಆ ವಿಭಾಗದಲ್ಲಿ ವೈದ್ಯೆ ಮಾತ್ರ ಲಭ್ಯವಿದ್ದು, ಚಿಕಿತ್ಸೆಕೊಡುವುದಕ್ಕೂ ಮುನ್ನ ರಕ್ತಸಿಕ್ತ ಗಾಯಗಳನ್ನು ಶುಚಿಗೊಳಿಸಿದ್ದಾರೆ. ಅಷ್ಟರಲ್ಲಿ ರೋಗಿ ತನಗೆ ನೋವಾಗುತ್ತಿದೆ ಎಂದು ಕಿರುಚಿಕೊಂಡಿದ್ದು, ರೋಗಿ, ಅವನ ಸಂಬಂಧಿಕರು ಮತ್ತು ಸ್ನೇಹಿತರು ವೈದ್ಯರೊಂದಿಗೆ ವಾಗ್ವಾದ ನಡೆಸಿದ್ದಾರೆ.

ಬಳಿಕ ವೈದ್ಯೆ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಮುಂಜಾನೆ 3.30ಕ್ಕೆ ಈ ಘಟನೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ರೋಗಿ ಮತ್ತು ಆತನ ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ.

ಕೋಲ್ಕತ್ತಾದಲ್ಲಿ ತರಬೇತಿ ನಿರತ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದರ ಬೆನ್ನಲ್ಲೇ ಮುಂಬೈನಲ್ಲಿ ಮಹಿಳಾ ವೈದ್ಯೆ ಮೇಲೆ ಹಲ್ಲೆ ನಡೆದಿರುವುದು ಸಂಚಲನ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net