

ವಾರಂಗಲ್: ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಹೃದಯಾಘಾತದಿಂದ ಸಾವುಗಳು ಹೆಚ್ಚಾಗುತ್ತಿವೆ. ಮಗುವಿಗೆ ಹಾಲುಣಿಸಿದ ಸ್ವಲ್ಪ ಸಮಯದ ನಂತರ ತಾಯಿ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.
ವರ್ಧನ್ನಪೇಟೆ ಮಂಡಲದ ಇಲ್ಲಾಂಡು ಗ್ರಾಮದ ಸುಶ್ಮಿತಾ ಎಂಬ ಮಹಿಳೆಯನ್ನು ಹೆರಿಗೆಗಾಗಿ ಇದೇ 13ರಂದು ವಾರಂಗಲ್ ಸಿಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ತಿಂಗಳ 16ರಂದು ಆಕೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಮಗುವಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಯ ನಿಯೋನಾಟಲ್ ಕೇರ್ ಯೂನಿಟ್ (ಎಸ್.ಎನ್.ಸಿ.ಯು)ಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ದೇಹಕ್ಕೆ ಪೂರಕ ಈ ಎಲೆಗಳ ಜ್ಯೂಸ್: ಇದರ ಹಣ್ಣು ಕೂಡ ಅಷ್ಟೇ ಪ್ರಯೋಜಕಾರಿ..
ನವಜಾತ ಶಿಶುವಿಗೆ ಆ ಕಡೆ ಚಿಕಿತ್ಸೆ ನೀಡಲಾಗುತ್ತಿದ್ದರೆ, ಇತ್ತ ಕಡೆ ಸುಶ್ಮಿತಾ ಮಗುವಿಗಾಗಿ ಪ್ರಾರ್ಥಿಸುತ್ತಿದ್ದಳು. ಎಂದಿನಂತೆ ಶುಕ್ರವಾರ ಮುಂಜಾನೆ 4 ಗಂಟೆಗೆ ಎಸ್‌ಎನ್‌ಸಿಯುನಲ್ಲಿ ಮಗುವಿಗೆ ಹಾಲುಣಿಸಿದ ಬಳಿಕ ವಾರ್ಡ್ ನಲ್ಲಿ ಮಲಗಿದ್ದ ಆಕೆ ಬೆಳಗ್ಗೆ 6 ಗಂಟೆಯಾದರೂ ಎದ್ದಿರಲಿಲ್ಲ. ಕುಟುಂಬಸ್ಥರು ತಡವಾಗಿ ಎಬ್ಬಿಸಿದರೂ ಆಕೆ ಪ್ರತಿಕ್ರಿಯಿಸಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಕೂಡಲೇ ವೈದ್ಯರಿಗೆ ವಿಷಯ ತಿಳಿಸಿದ್ದಾರೆ.
ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ಹೃದಯಾಘಾತವಾಗಿರುವುದನ್ನು ಪತ್ತೆ ಮಾಡಿದ್ದು, ತಕ್ಷಣವೇ ಸಿಪಿಆರ್ ಮಾಡಿದರೂ ಸಹಿತ ಫಲ ಸಿಕ್ಕಿರಲಿಲ್ಲ. ಆಕೆ ಅದಾಗಲೇ ಮೃತಪಟ್ಟಿದ್ದಳು. ಮೊದಲ ಹೆರಿಗೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಆಕೆಯ ಮರಣದ ನಂತರ ನವಜಾತ ಶಿಶು ತಾಯಿಯ ಪ್ರೀತಿಯನ್ನು ಕಳೆದುಕೊಂಡಿದೆ.(ಏಜೆನ್ಸೀಸ್)