

ಲಖನೌ: ಗರ್ಭಿಣಿಯೋರ್ವಳು ಕೊವಿಡ್-19 ಟೆಸ್ಟ್ ಮಾಡಿಸಲು ಸರತಿ ಸಾಲಿನಲ್ಲಿ ನಿಂತಾಗಲೇ ಅವರಿಗೆ ಹೆರಿಗೆಯಾಗಿರುವ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
22 ವರ್ಷದ ತುಂಬು ಗರ್ಭಿಣಿ ಹೆರಿಗೆಗಾಗಿ ರಾಮ್ ಮನೋಹರ್ ಲೋಹಿಯಾ ಮೆಡಿಕಲ್ ಸೈನ್ಸ್ ಇನ್ಸ್ಟಿಟ್ಯೂಟ್ಗೆ ಆಗಮಿಸಿದ್ದರು. ಆದೆರ ಆಸ್ಪತ್ರೆ ಅವರನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದೆ. ಮೊದಲು ಕೊವಿಡ್-19 ಟೆಸ್ಟ್ ಮಾಡಿಸಬೇಕು. ವರದಿ ನೆಗೆಟಿವ್ ಬಂದರೆ ಮಾತ್ರ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು.
ಆಗ ಅನಿವಾರ್ಯವಾಗಿ ಗರ್ಭಿಣಿ ಕೊವಿಡ್-19 ಟೆಸ್ಟ್ ಮಾಡಿಸಲು ಹೋಗಬೇಕಾಯಿತು. ಸೋಮವಾರ ಕ್ಯೂದಲ್ಲಿ ನಿಂತಾಗಲೇ ಹೆರಿಗೆ ನೋವು ಕಾಣಿಸಿಕೊಂಡು, ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.
ಮಹಿಳೆಯ ಹೆಸರು ಪಾಲಾಕ್. ಕೂಲಿ ಕಾರ್ಮಿಕಳು. ಆಗಲೇ ದಿನ ತುಂಬಿದ್ದರಿಂದ ಆಸ್ಪತ್ರೆಗೆ ದಾಖಲಾಗಲು ಬಂದಿದ್ದಳು. ನಿಂತಿದ್ದಾಗಲೇ ಆಕೆಯ ಗರ್ಭಚೀಲದಿಂದ ನೀರು ಹರಿಯಲು ಪ್ರಾರಂಭವಾಗಿ, ಅಲ್ಲೇ ಮಗು ಜನಿಸಿದೆ.
ಈ ಘಟನೆಯಿಂದ ಉಳಿದವರೂ ಗಾಬರಿಗೊಂಡರು. ಅಲ್ಲೇ ಕೊವಿಡ್-19 ಟೆಸ್ಟ್ ಮಾಡುತ್ತಿದ್ದ ವೈದ್ಯಕೀಯ ಸಿಬ್ಬಂದಿ ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ?: ರಮೇಶ್ ಜಾರಕಿಹೊಳಿ ಟಾಂಗ್
ಹೆರಿಗೆ ವಿಭಾಗದ ವೈದ್ಯರನ್ನು ಘಟನೆಯ ಬಗ್ಗೆ ವರದಿ ಕೇಳಲಾಗಿದೆ ಎಂದು ರಾಮ್ ಮನೋಹರ್ ಲೋಹಿಯಾ ಮೆಡಿಕಲ್ ಸೈನ್ಸ್ ಇನ್ಸ್ಟಿಟ್ಯೂಟ್ನ ಹಿರಿಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಐವರು ವೈದ್ಯ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತಿನಲ್ಲಿ ಇಡಲಾಗಿದೆ. ಸಂಪೂರ್ಣ ವರದಿ ನೀಡಲು ಸೂಚಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ನುಜಾಹತ್ ಹುಸೇನ್ ತಿಳಿಸಿದ್ದಾರೆ.
ಸದ್ಯ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವಕ್ತಾರ ಡಾ. ಶ್ರಿಕೇಶ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)