ಫ್ಲ್ಯಾಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ!; ಪೊಲೀಸರಿಂದ ತನಿಖೆ ಆರಂಭ

Untitled design - 2023-08-03T172521.555
Published on

ಮುಂಬೈ: ಫ್ಲ್ಯಾಟ್‌ನಲ್ಲಿ 78 ವರ್ಷ ವಯಸ್ಸಿನ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮುಂಬೈನ ರಾಜೇಂದ್ರ ನಗರದಲ್ಲಿ ವರದಿಯಾಗಿದೆ.

ಅಪಘಾತ ಮರಣ ವರದಿ (ADR) ಅಡಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಫ್ಲಾಟ್‌ನಲ್ಲಿ ಪತ್ತೆಯಾದ ಮಹಿಳೆಯನ್ನು ಸುಲೋಚನಾ ಭಾಸ್ಕರ್ ಶೆಟ್ಟಿ ಎಂದು ಗುರುತಿಸಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಡಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕಸ್ತೂರ್ಬಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ: ಬುಧವಾರ ಸಂಜೆ ಮಹಿಳೆ ವಾಸಿಸುತ್ತಿದ್ದ ಫ್ಲ್ಯಾಟ್‌​ನಿಂದ ದುರ್ವಾಸನೆ ಬಂದಿದೆ. ಈ ಬಗ್ಗೆ ನೆರೆಹೊರೆಯವರು ಕೂಡಲೇ ಕರೆ ಮಾಡಿ ನಮಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದೇವೆ ಎಂದು ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಜನರಿಂದ ಲಭಿಸಿದ ಮಾಹಿತಿ ಪ್ರಕಾರ, ಮಹಿಳೆಯ ಆರೋಗ್ಯ ಸರಿಯಾಗಿರಲಿಲ್ಲ. ಅವರಿಗೆ ರೇಷ್ಮಾ ಬಿರೇನ್ ಸಂಘರಾಜ್ ಎಂಬ ಓರ್ವ ಮಗಳಿದ್ದು, ಆಕೆ ಅಮೆರಿಕಾದಲ್ಲಿ ನೆಲೆಸಿದ್ದಾಳೆ ಎಂಬ ಸಂಗತಿ ನಮಗೆ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net