ಮಲಗಿದ್ದವರ ಮೇಲೆ ಹರಿದ ಟೆಂಪೋ; ಇಬ್ಬರು ಮೃತ್ಯು, ಐವರು ಗಂಭೀರ

Crime Scene
Published on

ನವದೆಹಲಿ: ಗುಡಿಸಿಲಿನ ಹೊರಗೆ ಮಲಗಿದ್ದವರ ಮೇಲೆ ಟೆಂಪೋ ಹರಿದ ಪರಿಣಾಮ ಇಬ್ಬರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಮಜ್ನು ಕಾ ತಿಲಾ ಪ್ರದೇಶದಲ್ಲಿ ನಡೆದಿದೆ.

ಘಟನೆ ಬೆಳಗಿನ ಜಾವ 5:33ರ ಸುಮಾರಿಗೆ ನಡೆದಿದ್ದು, ಮಹಿಳೆ ಹಾಗೂ ಆಕೆಯ ನಾಲ್ಕು ವರ್ಷದ ಮಗಳು ಮೃತಪಟ್ಟಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಉತ್ತರ ವಿಭಾಗದ ಡಿಸಿಪಿ ಸಾಗರ್​ ಸಿಂಗ್​ ಕಳ್ಸಿ ಬೆಳಗಿನ ಜಾವ 5:33ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಜ್ಯೋತಿ (32) ಹಾಗೂ ಆಕೆಯ ನಾಲ್ಕು ವರ್ಷದ ಮಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆ ನಡೆದ ಸ್ಥಳದಲ್ಲಿ ಟಾಟಾ ಏಸ್​ ವಾಹನ ಕಾಣಿಸಿಕೊಂಡಿದ್ದು, ಆರೋಪಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನ ವಿರುದ್ಧ ಭಾರತ ದಂಡ ಸಂಹಿತೆ (IPC Section) 279, 304A, 337ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಾರ್ಜ್​ಶೀಟ್​ ಸಿದ್ದಪಡಿಸಿ ಬಂಧಿತನನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಉತ್ತರ ವಿಭಾಗದ ಡಿಸಿಪಿ ಸಾಗರ್​ ಸಿಂಗ್​ ಕಳ್ಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net