

ಪಟನಾ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ತನ್ನ ಬಾಯ್ಫ್ರೆಂಡ್ ಗುಪ್ತಾಂಗವನ್ನೇ ಕತ್ತರಿಸಿರುವ ಆಘಾತಕಾರಿ ಘಟನೆ ಬಿಹಾರದ ಸರನ್ ಜಿಲ್ಲೆಯ ಪುರಾಣಿ ಬಸನ್ನಲ್ಲಿ ನಡೆದಿದೆ.
ಹಲ್ಲೆಗೊಳಗಾದ ಸಂತ್ರಸ್ತ ಮಧುರಾ ಬ್ಲಾಕ್ನ ವಾರ್ಡ್ ನಂ. 12ರ ಕೌನ್ಸಿಲರ್. ದಾಳಿ ನಡೆಸಿದ ಪ್ರೇಯಸಿ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು, ಕೊಲೆ ಯತ್ನದ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಸಂತ್ರಸ್ತನನ್ನು ಚಿಕಿತ್ಸೆಗಾಗಿ ಪಟನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದಾಖಲಿಸಲಾಗಿದೆ.
ಕೌನ್ಸಿಲರ್ ಮತ್ತು ಆರೋಪಿ ಡಾಕ್ಟರ್ ಇಬ್ಬರು ಕಳೆದ ಐದು ವರ್ಷಗಳಿಂದ ಸಂಬಂಧದಲ್ಲಿದ್ದರು. ಅನೇಕ ಬಾರಿ ಮದುವೆ ಬಗ್ಗೆ ಪಸ್ತಾಪ ಮಾಡಿದರೂ ಏನಾದರೂ ಒಂದು ನೆಪ ಹೇಳಿ ಕೌನ್ಸಿಲರ್ ಮುಂದೂಡುತ್ತಿದ್ದ. ಕೊನೆಗೂ ಆತನ ಮನವೊಲಿಸಿ ನ್ಯಾಯಾಲಯದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಒಪ್ಪಿಸಿದಳು. ಅದರಂತೆ, ಮದುವೆಗಾಗಿ ನ್ಯಾಯಾಲಯಕ್ಕೆ ಬಂದರೂ, ಕೌನ್ಸಿಲರ್ ಮಾತ್ರ ಹಾಜರಾಗಲಿಲ್ಲ.
ಇದಾದ ನಂತರ ಆರೋಪಿ ಡಾಕ್ಟರ್, ಕೌನ್ಸಿಲರ್ಗೆ ಕರೆ ಮಾಡಿ ಮಾತನಾಡಬೇಕೆಂದು ತನ್ನ ಮನೆಗೆ ಕರೆದಳು. ಆತ ಮನೆ ಬಂದಾಗ, ನಯವಾಗಿ ಮಾತನಾಡಿ ಖಾಸಗಿ ಅಂಗವನ್ನೇ ಕತ್ತರಿಸಿದ್ದಾಳೆ. ಕೌನ್ಸಿಲರ್ನ ಕೂಗು ಕೇಳಿದ ನೆರೆಹೊರೆಯವರು ಮನೆಗೆ ಓಡಿ ಬಂದಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿ, ಆತನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಸರನ್ ಜಿಲ್ಲೆಯ ಮಧುರಾ ಪೊಲೀಸ್ ಠಾಣೆಯ ಎಸ್ಎಚ್ಒ ಮಾತನಾಡಿ, ಆರೋಪಿ ಮಹಿಳೆ ಹಾಜಿಪುರ ಮೂಲದವಳು. ವೃತ್ತಿಯಲ್ಲಿ ವೈದ್ಯೆಯಾಗಿದ್ದಾಳೆ. ಆಕೆಗೆ 25 ವರ್ಷ. ಮಧುರಾದಲ್ಲಿ ವೈದ್ಯೆಯಾಗಿ ಅಭ್ಯಾಸ ಮಾಡುತ್ತಿದ್ದಳು. ಸಂತ್ರಸ್ತ ಕೌನ್ಸಿಲರ್ ಕೂಡ ಅವಿವಾಹಿತ ಎಂದು ತಿಳಿಸಿದ್ದಾರೆ.
ನಾವು ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಎಚ್ಒ ಅವರು ಹೇಳಿದ್ದಾರೆ. (ಏಜೆನ್ಸೀಸ್)