

ನವದೆಹಲಿ: ಈಕೆ ಮಕ್ಕಳು ಚೆನ್ನಾಗಿರಬೇಕು ಎಂದು ಎಷ್ಟು ಬಯಸಿದ್ದಳೆಂದರೆ ತನ್ನ ಮೂವರೂ ಮಕ್ಕಳನ್ನು ಕೊಂದು ಈಗ ತಪ್ಪೊಪ್ಪಿಕೊಂಡಿದ್ದಾಳೆ. ತುಂಬಾ ಮೃದುವಾಗಿಯೇ ನಾನು ಅವರನ್ನು ಸಾಯಿಸಿದ್ದೇನೆ ಎಂದು ಹೇಳಿಕೊಂಡಿರುವ ಈಕೆ, ಈ ಅಪರಾಧಕ್ಕಾಗಿ ಉಳಿದ ಪೂರ್ತಿ ಜೀವನವನ್ನು ಜೈಲಿನಲ್ಲಿ ಕಳೆಯಲೂ ಸಿದ್ಧ ಎಂದೂ ಹೇಳಿದ್ದಾಳೆ.
ಗಂಡನಿಂದ ಮಕ್ಕಳು ಅನುಭವಿಸುತ್ತಿರುವ ಕಿರುಕುಳವನ್ನು ನೋಡಲು ಸಾಧ್ಯವಾಗದೇ ಹೀಗೆ ಮಾಡಿದ್ದೇನೆ. ಅವರು ದಿನಾ ಇಷ್ಟಿಷ್ಟೇ ಸಾಯುವ ಬದಲು ಒಮ್ಮೆಗೇ ಸತ್ತು ಹೋಗುವುದೇ ಒಳಿತು ಎಂದುಕೊಂಡು ಹಾಗೆ ಮಾಡಿದ್ದೆ. ಅವರನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಿದೆ. ಅದನ್ನು ಕೂಡ ತುಂಬಾ ಮೃದುವಾಗಿ ಮಾಡಿದ್ದೇನೆ ಎಂಬುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.
ಹೀಗೆ ಮಕ್ಕಳನ್ನು ಸಾಯಿಸಿ ಅವರ ಹಿತ(?) ಬಯಸಿದ ಈ ತಾಯಿಯ ಹೆಸರು ಲಿಲಿಯಾನಾ ಕ್ಯಾರಿಲೊ. ಕ್ಯಾಲಿಫೋರ್ನಿಯಾದ 30 ವರ್ಷದ ಈಕೆ ತನ್ನ 6 ತಿಂಗಳ ಮಗಳನ್ನೂ ಸೇರಿಸಿ ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಕೈಯಾರೆ ಸಾಯಿಸಿದ್ದಾಳೆ. ಪುತ್ರ 3 ವರ್ಷದ ಟೆರ್ರಿ, ಪುತ್ರಿಯರಾದ 2 ವರ್ಷದ ಜೋಆನ್ನಾ ಹಾಗೂ 6 ತಿಂಗಳ ಸಿಯೆರಾ ಮೃತರು.
ಈಕೆ ಪತಿ ಎರಿಕ್ ಡೆಂಟನ್ ಜತೆ ಲಾಸ್ ಏಂಜಲೀಸ್ನ ರೆಸೆಡಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದು, ಕಳೆದ ವಾರಾಂತ್ಯದಲ್ಲಿ ಇವರ ಮನೆಯಲ್ಲಿ ಮಕ್ಕಳ ಶವ ಪತ್ತೆಯಾಗಿತ್ತು. ಆಗ ಕೊಲೆ ಅನುಮಾನದ ಮೇರೆಗೆ ತಾಯಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ನಂತರ ವಿಚಾರಣೆಗೆ ಒಳಪಡಿಸಿದಾಗ ಈಕೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಗಂಡ ಮದ್ಯವ್ಯಸನಿ ಹಾಗೂ ವಿಕ್ಷಿಪ್ತ ವ್ಯಕ್ತಿತ್ವದವನಾಗಿದ್ದು, ಆತ ಮಕ್ಕಳಿಗೆ ನೀಡುತ್ತಿದ್ದ ಕಿರುಕುಳ ನೋಡಲಾಗದೆ ಹೀಗೆ ಮಾಡಿದ್ದಾಗಿ ಲಿಲಿಯಾನಾ ಹೇಳಿಕೊಂಡಿದ್ದಾಳೆ.