

ಎರ್ನಾಕುಲಂ: ಆಕಸ್ಮಿಕವಾಗಿ ಬಾವಿಗೆ ಬಿದ್ದ ಪತಿಯನ್ನು ರಕ್ಷಿಸಲು ಮಹಿಳೆಯೊಬ್ಬರು 40 ಅಡಿ ಆಳದ ಬಾವಿಗೆ ಹಾರಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಪಿರವಂ ಪುರಸಭೆಯ ಇಳಂಜಿಕ್ಕಾವಿಲ್‌ನಲ್ಲಿ ನಡೆದಿದೆ. ಬಾವಿಗೆ ಬಿದ್ದವರನ್ನು ನಿವೃತ್ತ ಪೊಲೀಸ್ ಅಧಿಕಾರಿ ರಮೇಶನ್ (64) ಎಂದು ಗುರುತಿಸಲಾಗಿದ್ದು, ಪತಿ-ಪತ್ನಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ಧಾರೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್ (Video Viral) ಆಗಿದೆ.
ತಮ್ಮ ಮನೆಯ ಹೊಲದಲ್ಲಿ ಬೆಳೆಸಲಾಗಿದ್ದ ಕಾಳುಮೆಣಸನ್ನು ಕೀಳುತ್ತಿದ್ದಾಗ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು. ಗಂಡ ಬಾವಿಗೆ ಬಿದ್ದು ಕಿರುಚಾಡುತ್ತಿರುವದನ್ನು ಗಮನಿಸಿದ ಪತ್ನಿ ಮೊದಲು ಪ್ಲ್ಯಾಸ್ಟಿಕ್ ಹಗ್ಗವನ್ನು ಎಸೆದು ಅದರ ಸಹಾಯದಿಂದ ಮೇಲಕ್ಕೆ ಬರುವಂತೆ ಸೂಚಿಸಿದ್ಧಾರೆ. ಆದರೆ, ರಮೇಶನ್ ಅವರಿಗೆ ಅದನ್ನು ಹಿಡಿದುಕೊಂಡು ಮೇಲೆ ಬರಲು ಸಾಧ್ಯವಾಗಲಿಲ್ಲ.
ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ ಮಹಿಳೆ ತನ್ನ ಪತಿ ನೀರಿನಲ್ಲಿ ಮುಳುಗದಂತೆ ನೋಡಿಕೊಳ್ಳಲು ಬಾವಿಗೆ ಇಳಿದಿದ್ದಾರೆ. ಬಳಿಕ ಬಾವಿಯ ಗೋಡೆಗೆ ಒರಗಿ ನಿಂತ ಪರಿಣಾಮ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ದಂಪತಿಗಳನ್ನು ಮೇಲಕ್ಕೆ ಎತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ.
ಬಾವಿಯಲ್ಲಿ ಸುಮಾರು 40 ಅಡಿ ಆಳದಲ್ಲಿದ್ದು, ಕೆಳಭಾಗದಲ್ಲಿ ಸುಮಾರು 5 ಅಡಿ ನೀರು ಇತ್ತು ಎಂದು ಹೇಳಲಾಗಿದೆ. ಪತಿಯನ್ನು ರಕ್ಷಿಸಲು ಮಹಿಳೆ ಬಾವಿಗೆ ಇಳಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದ್ದು, ಅನೇಕರು ಮಹಿಳೆಯ ನಡೆಯನ್ನು ಮೆಚ್ಚಿ ಕಮೆಂಟ್ ಹಾಕುತ್ತಿದ್ದಾರೆ.