ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !

fir
Published on

ಭೋಪಾಲ್ : ರೇಪ್ ಮಾಡಲು ಪ್ರಯತ್ನಿಸುತ್ತಿದ್ದ ಪುರುಷನ ಮರ್ಮಾಂಗವನ್ನು ಕಡಿದುಹಾಕಿರುವ ಘಟನೆಯೊಂದು ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯ ಉಮರಿಹಾ ಗ್ರಾಮದಿಂದ ವರದಿಯಾಗಿದೆ. ಮನೆಗೆ ನುಗ್ಗಿ ತನ್ನ ಮೇಲೆ ಬಲಾತ್ಕಾರದ ಯತ್ನ ನಡೆಸಿದ ಪುರುಷನಿಂದ ಬಚಾವಾಗಲು ಈ ರೀತಿ ಹಲ್ಲೆ ನಡೆಸಿರುವ ಮಹಿಳೆಯ ಮೇಲೂ ಇದೀಗ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಮಾರ್ಚ್ 18 ರ ರಾತ್ರಿ 11 ಗಂಟೆಗೆ ಸಂತ್ರಸ್ತೆ ಮತ್ತು ಆರೋಪಿ ಎರಡೂ ಆಗಿರುವ 45 ವರ್ಷದ ಮಹಿಳೆ ತನ್ನ ಮನೆಯಲ್ಲಿ 13 ರ ಹರೆಯದ ಮಗನೊಂದಿಗಿದ್ದಾಗ, ಆರೋಪಿ ಮತ್ತು ಸಂತ್ರಸ್ತ ಎರಡೂ ಆಗಿರುವ ಪುರುಷ ಮನೆಯೊಳಕ್ಕೆ ನುಸುಳಿದ ಎನ್ನಲಾಗಿದೆ. ಕಳ್ಳನೆಂದು ತಿಳಿದು ಮಗ ಸಹಾಯ ಕೇಳಲು ಆಚೆಗೆ ಓಡಿದ್ದಾನೆ. ಇತ್ತ ಮಹಿಳೆಯನ್ನು ಹೊಡೆದು ಬಡಿದು ಅತ್ಯಾಚಾರವೆಸಗಲು ಆರೋಪಿ ಪುರುಷ ಪ್ರಯತ್ನಿಸಿದ್ದಾನೆ.

ಬಹಳಷ್ಟು ಸಮಯ ತನ್ನ ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸಿದ ಮೇಲೆ ಮಹಿಳೆ, ಮಂಚದ ಕೆಳಗೆ ಬಿದ್ದಿದ್ದ ಕೊಡಲಿ ಕಂಡಿದೆ. ಅದನ್ನು ತೆಗೆದುಕೊಂಡು ಅವನ ಮರ್ಮಾಂಗಕ್ಕೆ ಹೊಡೆದಿದ್ದಾಳೆ. ನಂತರ ಮಧ್ಯರಾತ್ರಿ 1.30 ರ ವೇಳೆಗೆ ಖಡ್ಡಿ ಪೊಲೀಸ್ ಔಟ್​ಪೋಸ್ಟಿಗೆ ಹೋಗಿ ದೂರು ದಾಖಲಿಸಿದ್ದಾಳೆ. ಮಹಿಳೆಯ ದೂರು ಸ್ವೀಕರಿಸಿರುವ ಪೊಲೀಸರು, ಮನೆಗೆ ನುಗ್ಗಿ ಬಲಾತ್ಕಾರದ ಯತ್ನ ನಡೆಸಿದ ಪುರುಷನ ಮೇಲೆ ಐಪಿಸಿಯ ವಿವಿಧ ಸೆಕ್ಷನ್​ಗಳಡಿ ಕೇಸು ದಾಖಲಿಸಿದ್ದಾರೆ.

ಹಾಗೇ ಪುರುಷನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ರೇವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ನೀಡಿದ ದೂರಿನ ಮೇಲೆ ಮಹಿಳೆಯ ಮೇಲೂ 10 ವರ್ಷಗಳವರೆಗೆ ಶಿಕ್ಷೆಯಾಗಬಲ್ಲ ಐಪಿಸಿ ಸೆಕ್ಷನ್ 327 ರಡಿ ಕೇಸು ದಾಖಲಿಸಲಾಗಿದೆ ಎಂದು ಎಸ್​ಐ ಧರ್ಮೇಂದ್ರ ಸಿಂಗ್ ರಾಜಪೂತ್ ಹೇಳಿದ್ದಾರೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net