

ಮುಂಬೈ: ಯೂಟ್ಯೂಬ್ ವೀಡಿಯೊಗಳನ್ನು ಲೈಕ್ ಮಾಡುವ ಕೆಲಸವನ್ನು ನೀಡುವುದಾಗಿ ಭರವಸೆ ನೀಡಿ 29 ವರ್ಷದ ಮಹಿಳೆಗೆ ಮೋಸ ಮಾಡಿದ್ದು ನಂತರ ಉತ್ತಮ ಆದಾಯವನ್ನು ಪಡೆಯಲು ತಮ್ಮ ವ್ಯವಹಾರ ಗುಂಪಿಗೆ ಸೇರುವಂತೆ ಕೇಳಿದ ಆರೋಪದ ಮೇಲೆ ಅಸ್ತಿತ್ವದಲ್ಲಿಲ್ಲದ ಆರು ಟೆಕ್ ಕಂಪನಿಗಳ ಐವರು ನಿರ್ದೇಶಕರನ್ನು ಬಂಧಿಸಲಾಗಿದೆ. ಬಂಧಿತರನ್ನು ಬಿಂದುಸರ್ ಶೆಲಾರ್ (40), ಮಹೇಶ್ ರಾವತ್ (24), ಯೋಗೇಶ್ ಖೌಲೆ (28) ಮತ್ತು ಅಮರಾವತಿಯ ಅಖ್ಸೆ ಖಾಡ್ಸೆ (27) ಮತ್ತು ಅಮಿತ್ ತಾವರ್ (28) ಎಂದು ಗುರುತಿಸಲಾಗಿದೆ.
ಆರೋಪಿಯು ಆಕೆಯ ವರ್ಚುವಲ್ ವ್ಯಾಲೆಟ್ ಅನ್ನು ರಚಿಸಿದ್ದನು. ಅದು ಆ ಮಹಿಳೆ ಹಣವನ್ನು ಗಳಿಸುತ್ತಿರುವುದನ್ನು ತೋರಿಸುತ್ತಿತ್ತು. ಇದಾದ ಮೇಲೆ ಈ ಖದೀಮ ಮುಂಬೈ ಪೊಲೀಸರಿಂದ ಬಂದಿದ್ದು ಎಂದು ಹೇಳಿ ನಕಲಿ ಪತ್ರವನ್ನು ಕಳುಹಿಸಿದ್ದಾನೆ. ಮಹಿಳೆಯ ಖಾತೆಯನ್ನು ನಿರ್ಬಂಧಿಸಲಾಗಿದ್ದು ಅವಳ ಖಾತೆಯನ್ನು ತೆರವುಗೊಳಿಸಲು ಅವರು ಆ ಮಹಿಳೆಯಿಂದ ಹಣವನ್ನು ತೆಗೆದುಕೊಂಡರು. ಹೀಗೆ ಅವರು ಎರಡು ವಾರಗಳಲ್ಲಿ 11.4 ಲಕ್ಷ ರೂ.ಗಳನ್ನು ಆಕೆಯಿಂದ ವಸೂಲಿ ಮಾಡಿ ವಂಚಿಸಿದ್ದಾರೆ.
ಮಹಿಳೆಯು ತನ್ನ ಬಯೋ-ಡೇಟಾವನ್ನು ಎರಡು ಉದ್ಯೋಗ ಪೋರ್ಟಲ್ಗಳಲ್ಲಿ ಅಪ್ಲೋಡ್ ಮಾಡಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಯೂಟ್ಯೂಬ್ ವೀಡಿಯೊಗಳನ್ನು ಲೈಕ್ ಮಾಡುವ, ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡು ಅದೇ ವಾಟ್ಸಾಪ್ ಸಂಖ್ಯೆಗೆ ಕಳುಹಿಸುವ ಕೆಲಸದಲ್ಲಿ ಆಸಕ್ತಿ ಇದೆಯೇ ಎಂದು ಕೇಳುವ ವ್ಯಕ್ತಿಯಿಂದ ಆಕೆಗೆ ವಾಟ್ಸಾಪ್ ಸಂದೇಶ ಬಂದಿದೆ. ಆರೋಪಿಯು ಅವಳಿಗೆ ವೀಡಿಯೊ ಲಿಂಕ್ ಅನ್ನು ಕಳುಹಿಸಿದ್ದು ಆ ವಿಡಿಯೋವನ್ನು ಆಕೆ ಲೈಕ್ ಮಾಡಿದ್ದಳು. ನಂತರ ಮುಂದಿನ ಸೂಚನೆಗಳನ್ನು ಅನುಸರಿಸಿದ್ದಳು. ಆರೋಪಿಗಳು ಆಕೆಯ ಖಾತೆಗೆ 250 ರೂ.ಗಳನ್ನು ಜಮಾ ಮಾಡಿದ್ದಾರೆ. ನಂತರ ಆರೋಪಿಯು ಅವಳನ್ನು ಟೆಲಿಗ್ರಾಮ್ ಚ್ಯಾನಲ್ ಒಂದಕ್ಕೆ ಸೇರುವಂತೆ ಮಾಡಿದನು.
ಇದಾದ ಮೇಲೆ ಆರೋಪಿಯು ಸಂತ್ರಸ್ತೆಯ ವರ್ಚುವಲ್ ವ್ಯಾಲೆಟ್ ಅನ್ನು ರಚಿಸಿದ್ದು ಅಲ್ಲಿ ಆಕೆ ತನ್ನ ಆದಾಯವನ್ನು ಪರಿಶೀಲಿಸಬಹುದಾಗಿತ್ತು. ಪರಿಶೀಲಿಸಿದಾಗ ಅದರಲ್ಲಿ ಅದಾಗಲೇ 3 ಲಕ್ಷ ರೂ.ಗಳು ಇರುವುದು ಕಂಡುಬಂದಿದೆ. ನಂತರ ಆ ಮಹಿಳೆಗೆ ಅವರ 'ಬಿಸಿನೆಸ್ ಪ್ಯಾಕೇಜ್' ನಲ್ಲಿ ಹೂಡಿಕೆ ಮಾಡಲು ಆಮಿಷವೊಡ್ಡಲಾಯಿತು. ಅದಕ್ಕೆ ಮಹಿಳೆ ಒಪ್ಪಿದಾಗ ವಿಭಿನ್ನ ಶುಲ್ಕಗಳನ್ನು ಪಾವತಿಸಲು ಕೇಳಲಾಯಿತು. ಹಣ ಕಟ್ಟಿಸಿಕೊಂಡ ನಂತರ ಆಕೆಯ ವರ್ಚುವಲ್ ವ್ಯಾಲೆಟ್ಅನ್ನು ಫ್ರೀಜ್ ಮಾಡಲಾಗಿದ್ದು ಅದನ್ನು ಮಾಮೂಲಿ ಸ್ಥಿತಿಗೆ ತರಲು ಮಹಿಳೆ ಹಣವನ್ನು ಕಳುಹಿಸಬೇಕಾಗುತ್ತದೆ ಎಂದು ಅವರು ಮುಂಬೈ ಪೊಲೀಸರ ನಕಲಿ ಪತ್ರವನ್ನು ಕಳುಹಿಸಿದ್ದಾರೆ.
ಇಷ್ಟೆಲ್ಲ ಆದ ಮೇಲೆ ದೂರುದಾರರು ತಮ್ಮ ಹೂಡಿಕೆ ಮತ್ತು ಲಾಭವನ್ನು ಹಿಂತೆಗೆದುಕೊಳ್ಳಲು ಬಯಸಿದ್ದರು. ಆಗ ಆರೋಪಿಯು ಾಕೆಯ ವರ್ಚುಚವಲ್ ವ್ಯಾಲೆಟ್ಅನ್ನು ಲಾಕ್ ಮಾಡಿದ್ದ. ಆಗ ಆಕೆಗೆ 11.4 ಲಕ್ಷ ರೂ.ಗಳನ್ನು ಕಳೆದುಕೊಂಡಿರುವ ಬಗ್ಗೆ ಅರಿವಿಗೆ ಬಂದಿದ್ದು ನಂತರ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿ ವಂಚಕರ ಬ್ಯಾಂಕ್ ಖಾತೆ ವಿವರಗಳ ಆಧಾರದ ಮೇಲೆ, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)