

ಲಖನೌ: ಉಗ್ರರ ಸ್ವರ್ಗ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿನ ಭಯೋತ್ಪಾದನೆಯಿಂದ ಬೇಸತ್ತು ತನ್ನ ತವರು ದೇಶವನ್ನು ತೊರೆದು ಭಾರತಕ್ಕೆ ಆಗಮಿಸಿ, ನಲೆಕಂಡುಕೊಂಡಿರುವ ಮಹಿಳೆಗೆ ಸುಮಾರು ಎರಡು ದಶಕಗಳ ಬಳಿಕ ಭಾರತೀಯ ಪೌರತ್ವ ( Indian Citizenship ) ದೊರೆತಿದೆ.
ಪಾಕ್ ಮೂಲದ ಮಹಿಳೆಗೆ ಪೌರತ್ವ ಪಡೆಯುವ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ, ನಿರಂತರ ಪ್ರಯತ್ನದಿಂದ ಕೊನೆಗೂ ಭಾರತೀಯ ಪ್ರಜೆಯಾಗಿದ್ದಾರೆ. ಭಯೋತ್ಪಾದನೆಯಿಂದ ಬೇಸತ್ತು ಧೈರ್ಯದಿಂದ ತನ್ನ ದೇಶವನ್ನು ತೊರೆದ ಮಹಿಳೆ, ನೇರವಾಗಿ ಭಾರತದ ರಾಜಧಾನಿ ದೆಹಲಿಯನ್ನು ತಲುಪಿದಳು. ಅಲ್ಲಿಯೇ ತನ್ನ ಉಳಿದ ಜೀವನವನ್ನು ನಡೆಸುವ ಕನಸು ಕಂಡಳು. ತನ್ನ ಯೋಜನೆಯಂತೆ ಸ್ಥಳೀಯ ಭಾರತೀಯ ಉದ್ಯಮಿ ಪುನೀತ್ ಕುಮಾರ್ ಎಂಬುವರನ್ನು ವಿವಾಹವಾದಳು ಮತ್ತು ದೆಹಲಿಯಲ್ಲಿಯೇ ಉಳಿದಳು. ದಂಪತಿಗೆ ಒಂದು ಮಗುವಿದೆ.
ಪಾಕ್ ಮೂಲದ ಮಹಿಳೆ ಭಾರತದಲ್ಲಿ ಹೊಸ ಜೀವನವನ್ನು ಪ್ರಾರಂಭಿಸಿದ ನಂತರವೂ, ಇಲ್ಲಿನ ಅಧಿಕಾರಿಗಳು ಆಕೆಯನ್ನು ವಿದೇಶಿಯಳಂತೆ ನಡೆಸಿಕೊಂಡರು. ಅವಳು ಭಾರತೀಯ ಪೌರತ್ವಕ್ಕಾಗಿ ಎಷ್ಟೇ ಬಾರಿ ಅರ್ಜಿ ಸಲ್ಲಿಸಿದರೂ, ಆ ಅರ್ಜಿಗಳನ್ನು ತಿರಸ್ಕರಿಸಲಾಯಿತು. ಕೊನೆಗೆ, 21 ವರ್ಷಗಳ ನಂತರ, ಆಕೆಯ ಭರವಸೆ ನಿಜವಾಗಿದೆ. ಆಕೆಗೆ ಭಾರತೀಯ ಪೌರತ್ವ ನೀಡುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಘೋಷಣೆ ಮಾಡಿದೆ.
ಅಂದಹಾಗೆ ಆ ಮಹಿಳೆಯ ಹೆಸರು ಪೂನಂ. ಆಕೆಗೆ 38 ವರ್ಷ ವಯಸ್ಸು. ಆಕೆ 2004 ರಲ್ಲಿ ತನ್ನ ಸಹೋದರ ಗಗನ್ ಜೊತೆ ಪಾಕಿಸ್ತಾನದ ಗಡಿಯನ್ನು ದಾಟಿ ಭಾರತಕ್ಕೆ ಬಂದಳು. ಪಾಕಿಸ್ತಾನದಲ್ಲಿನ ಭಯೋತ್ಪಾದನೆ, ಧಾರ್ಮಿಕ ಮೂಲಭೂತವಾದ ಮತ್ತು ತೀವ್ರ ಬಡತನದ ಕೂಪದಲ್ಲಿ ನರಳುವುದಕ್ಕಿಂತ ಭಾರತದಲ್ಲಿ ಹೆಚ್ಚು ಮುಕ್ತ ಮತ್ತು ಆರಾಮದಾಯಕ ಜೀವನವನ್ನು ನಡೆಸುವ ಆಶಯದೊಂದಿಗೆ ಭಾರತದಲ್ಲಿಯೇ ಉಳಿಯಲು ನಿರ್ಧರಿಸಿದರು. ಆರಂಭದಲ್ಲಿ, ಅವರು ದೆಹಲಿ ಮತ್ತು ರಾಂಪುರ ನಡುವೆ ಆಗಾಗ ಸ್ಥಳಾಂತರಗೊಂಡರು. 2005 ರಲ್ಲಿ, ಪೂನಂ ಸ್ಥಳೀಯ ಉದ್ಯಮಿ ಪುನೀತ್ ಎಂಬುವರನ್ನು ವಿವಾಹವಾದರು.
ಮದುವೆಯಾದ ಬಳಿಕವೂ ತನ್ನ ಪಾಲಕರು ಮತ್ತು ಸಂಬಂಧಿಕರ ಮೇಲಿನ ಪ್ರೀತಿಯಿಂದ, ಅವರು ಆಗಾಗ್ಗೆ ಅವರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹಿಂತಿರುಗುತ್ತಿದ್ದರು. ಅವರ ಬಳಿ ಪಾಕಿಸ್ತಾನಿ ಗುರುತಿನ ಚೀಟಿಯನ್ನು ಇದ್ದಿದ್ದರಿಂದ ಇದೆಲ್ಲವೂ ಸಾಧ್ಯವಾಯಿತು. ಕೆಲವು ವರ್ಷಗಳ ನಂತರ, ಗುರುತಿನ ಚೀಟಿ ಅವಧಿ ಮುಗಿದು ಪಾಕಿಸ್ತಾನಿ ಪಾಸ್‌ಪೋರ್ಟ್ ನವೀಕರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ತನ್ನ ತವರು ಮನೆಗೆ ಭೇಟಿ ನೀಡುವ ಪೂನಂ ಕನಸು ಭಗ್ನವಾಯಿತು.
ಇದಾದ ಬಳಿಕ ಪೂನಂ, ಭಾರತವನ್ನು ತಮ್ಮ ತವರು ಮನೆಯೆಂದು ಪರಿಗಣಿಸಲು ಪ್ರಾರಂಭಿಸಿದರು. ಇಲ್ಲಿಗೆ ಬಂದ ನಂತರ ಭಾರತೀಯ ಪೌರತ್ವಕ್ಕಾಗಿ ಹಲವು ಬಾರಿ ಅರ್ಜಿ ಸಲ್ಲಿಸಿದರು. ಆದರೆ, ಅವೆಲ್ಲವೂ ತಿರಸ್ಕರಿಸಲ್ಪಟ್ಟವು. ಆದಾಗ್ಯೂ, ತನ್ನ ಪ್ರಯತ್ನವನ್ನು ಮಾತ್ರ ಪೂನಂ ಬಿಟ್ಟುಕೊಡಲಿಲ್ಲ. ನಿರಂತರವಾಗಿ ಅರ್ಜಿ ಸಲ್ಲಿಸಿದ ಪರಿಣಾಮ ಅದರಲ್ಲಿ ಯಶಸ್ವಿ ಕೂಡ ಆದರು. ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ನಿಬಂಧನೆಗಳ ಪ್ರಕಾರ ಅವರನ್ನು ಇತ್ತೀಚೆಗೆ ಭಾರತೀಯ ನಾಗರಿಕಳೆಂದು ಘೋಷಣೆ ಮಾಡಲಾಯಿತು. ಇದೇ ಖುಷಿಯಲ್ಲಿ ಅವರ ಪತಿ ಪುನೀತ್ ದೀಪಾವಳಿ ಹಬ್ಬದ ಸಮಯದಲ್ಲಿ ತಮ್ಮ ಕುಟುಂಬದಲ್ಲಿ ಸಂತೋಷದ ಬೆಳಕು ಬೆಳಗಲಿ ಎಂದು ಸಂಭ್ರಮಾಚರಣೆ ಮಾಡಿದರು.
ಈ ಪೌರತ್ವ ನಮಗೆ ನಿಜಕ್ಕೂ ಹಬ್ಬದ ಉಡುಗೊರೆ. ಇದು ಈ ದೀಪಾವಳಿಯನ್ನು ಇನ್ನಷ್ಟು ವಿಶೇಷವಾಗಿಸಿದೆ. ನಾವು ಲಖನೌಗೆ ಹೋಗಿ ಪೌರತ್ವ ದಾಖಲೆಗಳನ್ನು ಸಲ್ಲಿಸುತ್ತೇವೆ ಎಂದು ಪುನೀತ್ ಸಂತೋಷದಿಂದ ಹೇಳಿದರು. ನನ್ನ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಶೀಘ್ರದಲ್ಲೇ ನಾನು ಆಧಾರ್, ಪ್ಯಾನ್ ಕಾರ್ಡ್ ಮತ್ತು ಇತರ ಭಾರತೀಯ ಗುರುತಿನ ಚೀಟಿಗಳಿಗೆ ಅರ್ಜಿ ಸಲ್ಲಿಸುತ್ತೇನೆ. ನನ್ನ ಬಳಿ ಇವುಗಳಿಲ್ಲದಿದ್ದರೂ, ನಾನು ಭಾರತೀಯಳೇ. ಆದರೆ ಇಂದಿನಿಂದ, ನಾನು ನಿಜವಾದ ಭಾರತೀಯಳಾಗಿ ಬದುಕುತ್ತೇನೆ ಎನ್ನುತ್ತಾ ಪೂನಂ ಸಂತೋಷದಿಂದ ಕಣ್ಣೀರು ಹಾಕಿದರು.
ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಭಯೋತ್ಪಾದನೆಯಿಂದಾಗಿ ಅನೇಕ ಕುಟುಂಬಗಳು ನಾಶವಾಗಿವೆ. ನನ್ನ ಸಹೋದರನ ತಂದೆ ಮತ್ತು ನನ್ನನ್ನು ಕನಿಷ್ಠ ಪಕ್ಷ ನಾವು ಎಲ್ಲೋ ವಾಸಿಸುತ್ತೇವೆ ಎಂಬ ಭರವಸೆಯೊಂದಿಗೆ ಭಾರತಕ್ಕೆ ಕಳುಹಿಸಲಾಯಿತು. ನಾವು ಇಲ್ಲಿ ಆರಾಮವಾಗಿದ್ದೇವೆ. ಈಗ ನನಗೆ ಭಾರತೀಯ ಪೌರತ್ವ ಸಿಕ್ಕಿದೆ. ನಾವು ಶೀಘ್ರದಲ್ಲೇ ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ಅದು ಬಂದ ನಂತರ, ನಾನು ಹೆಮ್ಮೆಯಿಂದ ಪಾಕಿಸ್ತಾನದಲ್ಲಿರುವ ನನ್ನ ಮನೆಗೆ ಹೋಗಿ ನನ್ನ ಕುಟುಂಬವನ್ನು ಭೇಟಿಯಾಗುತ್ತೇನೆ ಎಂದು ಪೂನಂ ಹೇಳಿದರು. ನಮ್ಮ ಮನೆ ಸ್ವಾತ್ ಕಣಿವೆಯ ಮಿಂಗೋರಾ ಪ್ರದೇಶದಲ್ಲಿದೆ ಎಂದು ಪೂನಂ ಬಹಿರಂಗಪಡಿಸಿದರು.
ಆಕೆಗೆ ಭಾರತೀಯ ಪೌರತ್ವ ನೀಡುವಲ್ಲಿ ನಮಗೆ ಯಾವುದೇ ಆಕ್ಷೇಪಣೆಗಳು ಕಾಣಲಿಲ್ಲ. ಅದಕ್ಕಾಗಿಯೇ ನಾವು ಈ ಬಾರಿ ಅರ್ಜಿಗೆ ಅನುಮತಿ ನೀಡಿದ್ದೇವೆ ಎಂದು ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ಮಿಶ್ರಾ ಹೇಳಿದರು. (ಏಜೆನ್ಸೀಸ್)